ಶಿಕ್ಷಣದ ಜತೆಗೆ ಪರಿಶ್ರಮ ಅವಶ್ಯ | Free training

ತುಮರಿಯಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದಲ್ಲಿ ಎಸ್.ರಾಮಪ್ಪ, ಹರೀಶ್, ಎಚ್.ಆರ್.ಹರೀಶ್, ಎಚ್.ಆರ್.ರವಿಕುಮಾರ್ ಇತರರಿದ್ದರು.
ತುಮರಿಯಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದಲ್ಲಿ ಎಸ್.ರಾಮಪ್ಪ, ಹರೀಶ್, ಎಚ್.ಆರ್.ಹರೀಶ್, ಎಚ್.ಆರ್.ರವಿಕುಮಾರ್ ಇತರರಿದ್ದರು.
Published on
ತುಮರಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪ್ರಮಾಣಪತ್ರಗಳು ಮಾತ್ರ ಉದ್ಯೋಗ ತಂದುಕೊಡುವುದಿಲ್ಲ. ವಿದ್ಯಾರ್ಥಿಗಳು ನಿರಂತರ ಶ್ರದ್ಧೆ ಹಾಗೂ ಕಠಿಣ ಪರಿಶ್ರಮ ರೂಢಿಸಿಕೊಂಡಾಗ ಜ್ಞಾನವು ಉತ್ತಮ ಉದ್ಯೋಗವಾಗಿ ಬದಲಾಗಲು ಸಾಧ್ಯ ಎಂದು ಸಿಗಂದೂರು ದೇವಸ್ಥಾನದ ಧರ್ಮಾಧಿಕಾರಿ ಎಸ್.ರಾಮಪ್ಪ ತಿಳಿಸಿದರು.
ಗ್ರಾಮದ ಚೌಡೇಶ್ವರಿ ಸಭಾ ಭವನದಲ್ಲಿ ಸಿಗಂದೂರು ಚೌಡಮ್ಮ ಎಜುಕೇಷನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇವಾಲಯವು ಧಾರ್ಮಿಕ ಕ್ಷೇತ್ರವಾಗಿರುವಂತೆ ಉದ್ಯೋಗ ಗಳಿಕೆಯೂ ಒಂದು ಧಾರ್ಮಿಕ ಕಾರ್ಯ. ಜೀವನ ನಡೆಸಲು ಸರ್ಕಾರಿ ಉದ್ಯೋಗವೇ ಬೇಕಾಗಿಲ್ಲ. ಆದರೆ ಹಿನ್ನೀರು ಪ್ರದೇಶದ ಜನರಿಗೆ ಬದುಕು ಕಟ್ಟಿಕೊಳ್ಳಲು ಬೇರೆ ಪರ್ಯಾಯ ಮಾರ್ಗಗಳು ಕಡಿಮೆ ಇರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಗಳ ಕಡೆಗೆ ಹೆಚ್ಚು ಗಮನ ಹರಿಸುವುದು ಅಗತ್ಯ ಎಂದು ಹೇಳಿದರು.
ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಸ್ಥಳೀಯ ಯುವಕರು ಸರ್ಕಾರಿ ಸೇವೆಗೆ ಸೇರಿ ಊರಿನ ಅಭಿವೃದ್ಧಿಗೆ ಶ್ರಮಿಸಿದಾಗ ಮಣ್ಣಿನ ಋಣ ತೀರಿಸಲು ಸಾಧ್ಯ. ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರಿಂದ ದೂರವಾಗದೆ ಜನಸೇವೆ ಮಾಡುವ ಹಂಬಲ ನಮ್ಮದಾಗಬೇಕು ಎಂದರು.
ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತುಮರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಹರೀಶ್, ಯೋಧ ಎಚ್.ಆರ್.ಹರೀಶ್ ಅಡಗಲೆ, ದೇವಸ್ಥಾನದ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್, ಪ್ರಮುಖರಾದ ಗಣೇಶ್ ಜಾಕಿ, ಆದರ್ಶ್, ಸುರೇಶ್, ಮೂಕಪ್ಪ, ಚಂದ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net