ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಎಚ್.ಎನ್.ನಾಗಮೋಹನದಾಸ್, ಕಿಮ್ಮನೆ ರತ್ನಾಕರ್, ಎಂ.ಎನ್.ರಮೇಶ್, ಕಡಿದಾಳು ದಯಾನಂದ್, ಭಾಸ್ಕರ ಜೋಯ್ಸ, ಡಾ. ಆರ್.ಕುಮಾರಸ್ವಾಮಿ, ಕೆ.ಎಲ್.ಪ್ರಸನ್ನ ಇದ್ದರು.
Published on:
Copied
Follow Us
ತೀರ್ಥಹಳ್ಳಿ: ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಆತಂಕದಲ್ಲಿದ್ದು ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಅರಿತು ಆಶಯವನ್ನು ಪಾಲಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಹೇಳಿದರು.
ತುಂಗಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾಜಿಕ ಹೋರಾಟಗಾರ ಕಾಮ್ರೇಡ್ ಕಾಳಮ್ಮನಗುಡಿ ಶ್ರೀನಿವಾಸ್ ಮತ್ತು ಯಡೂರು ಶ್ರೀನಿವಾಸ ಜೋಯ್ಸ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂವಿಧಾನ ಅರಿವು ಮತ್ತು ನಾಗರಿಕ ಸಮಾಜ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಹನೀಯರನ್ನು ಸ್ಮರಿಸುವ ಈ ಕಾರ್ಯ ಸ್ತುತ್ಯರ್ಹ. ಸಂವಿಧಾನ ರಚನೆಯಾಗಿ 75 ವರ್ಷಗಳ ನಂತರವೂ ಪ್ರಜೆಗಳಿಗೆ ಅವರ ಹಕ್ಕನ್ನು ತಿಳಿಸುವಲ್ಲಿ ಸರ್ಕಾರಗಳು ವಿಲವಾಗಿವೆ. ಜನರೂ ಈ ಬಗ್ಗೆ ಪ್ರಯತ್ನ ಮಾಡಿಲ್ಲ. ಶಾಲಾ ಕಾಲೇಜುಗಳಲ್ಲೂ ವಿಷಯ ತಜ್ಞರ ಕೊರತೆಯಿಂದ ವಿದ್ಯಾರ್ಥಿಗಳಿಗೂ ಸಂವಿಧಾನದ ಮಾಹಿತಿ ಇಲ್ಲವಾಗಿದೆ ಎಂದರು.
ಸಂವಿಧಾನದ ಆಶಯದಂತೆ ತಮ್ಮ ಹಕ್ಕನ್ನು ಪ್ರತಿಪಾದಿಸದ ಕಾರಣ ಶಾಸಕಾಂಗ ಮತ್ತು ಕಾರ್ಯಾಂಗ ಸ್ವೇಚ್ಚಾಚಾರದಿಂದ ವರ್ತಿಸುತ್ತಿದ್ದು, ನ್ಯಾಯಾಂಗ ಕೂಡ ಇದರಿಂದ ಹೊರತಾಗಿಲ್ಲ. ಭಾರತವನ್ನು ಅರಿಯದೆ ಸಂವಿಧಾನ ಅರಿವಾಗದು. ಸ್ವಾತಂತ್ರೃ ದೊರೆತಿರುವುದು ಕೇವಲ ನೆಲಕ್ಕಾಗಿ ಅಲ್ಲ. ಈ ದೇಶದಲ್ಲಿ ಬದುಕುತ್ತಿರುವ 4635 ಜಾತಿ ಉಪಜಾತಿಯ ಜನರಿಗೂ ಇದರ ಲಾಭ ದೊರೆಯಬೇಕಿದೆ ಎಂದು ಹೇಳಿದರು.
ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಪರಿವರ್ತಿಸಬೇಕಾದ ಹಂತದಲ್ಲಿ ಸರ್ಕಾರಿ ಸ್ವಾಮ್ಯದ ಶಿಕ್ಷಣ, ತಾಂತ್ರಿಕ ಮುಂತಾದ ಒಂದೊಂದೇ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಪ್ರಜೆಗಳು ಮೌನವಾಗಿರುವ ಕಾರಣ ಮುಂದೊಂದು ದಿನ ಸಂಸತ್ ಭವನವನ್ನೂ ಉದ್ಯಮಿಗಳಿಗೆ ನೀಡಿದರೆ ಆಶ್ಚರ್ಯವಿಲ್ಲ ಎಂದರು.
ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್, ಮಾಜಿ ಅಧ್ಯಕ್ಷ ಕಡಿದಾಳು ದಯಾನಂದ್, ವೈ.ವಿ.ಭಾಸ್ಕರ ಜೋಯ್ಸ, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎಲ್.ಪ್ರಸನ್ನ ಇದ್ದರು.