ಡಿಸಿಸಿ ಬ್ಯಾಂಕ್‌ಗೆ ಸರ್ಕಾರಗಳಿಂದ ಸಬ್ಸಿಡಿ ಕಡಿತ | Pressmeet

ಆರ್.ಎಂ.ಮಂಜುನಾಥ ಗೌಡ
ಆರ್.ಎಂ.ಮಂಜುನಾಥ ಗೌಡ
Published on
ತೀರ್ಥಹಳ್ಳಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಯಾವುದೇ ರೀತಿಯ ಆರ್ಥಿಕ ನೆರವು ದೊರೆಯುತ್ತಿಲ್ಲ. ಸಬ್ಸಿಡಿಯನ್ನು ಕೂಡಾ ಶೇ.80ರಷ್ಟು ಕಡಿತಗೊಳಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಪ್ರಸ್ತುತ 3750 ಕೋಟಿ ರೂ. ಬಂಡವಾಳ ಹೊಂದಿದ್ದು ಆರ್ಥಿಕವಾಗಿ ಸುಭದ್ರವಾಗಿದೆ. ಇದರಲ್ಲಿ ಸರ್ಕಾರದ ಒಂದು ರೂಪಾಯಿಯೂ ಆರ್ಥಿಕ ನೆರವು ಇಲ್ಲ. ನಬಾರ್ಡ್‌ನಿಂದ 120 ಕೋಟಿ ರೂ. ಆರ್ಥಿಕ ನೆರವು ಪಡೆಯಲಾಗಿದೆ. ಉಳಿದಂತೆ ಸ್ವಂತ ಆರ್ಥಿಕ ಸಂಪನ್ಮೂಲ ಹೊಂದಲಾಗಿದೆ. ಸಬ್ಸಿಡಿ ಹಣವನ್ನು ಶೇ.90ರಷ್ಟು ಬದಲಿಗೆ ಪ್ರಸ್ತುತ ಶೇ.10ಕ್ಕೆ ಇಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಫೆ.5ರಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆ ಆರಂಭವಾಗಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇದು 5ನೇ ಶಾಖೆ. ತಾಲೂಕಿನ ಆರಗ, ದೇವಂಗಿ, ಮೇಗರವಳ್ಳಿ ಮತ್ತು ಕಟ್ಟೆಹಕ್ಕಲುನಲ್ಲಿ ಹೊಸದಾಗಿ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ನಿರೀಕ್ಷೆಯಲ್ಲಿದ್ದೇವೆ. ವ್ಯವಹಾರಸ್ಥರಿಗೆ 5 ಕೋಟಿ ರೂ.ವರೆಗೆ ಓವರ್ ಡ್ರಾಫ್ಟ್ ಸೌಲಭ್ಯ ನೀಡಲಾಗುವುದು ಎಂದರು.
ಮುಂದಿನ ವರ್ಷ ಬ್ಯಾಂಕಿಗೆ 75 ವರ್ಷ ಪೂರ್ಣವಾಗಲಿದೆ. ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಮತ್ತು ಜಿಲ್ಲೆಯ ಶೇ.75ರಷ್ಟು ರೈತರನ್ನು ತಲುಪುವ ಸಲುವಾಗಿ ಜಿಲ್ಲಾದ್ಯಂತ 50 ಶಾಖೆಯನ್ನು ತೆರೆಯುವ ಉದ್ದೇಶವಿದೆ. ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 100 ಕೋಟಿ ರೂ.ಗೂ ಅಧಿಕ, 3500 ಸ್ವ ಸಹಾಯ ಗುಂಪುಗಳಿಗೆ 160 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಸಕ್ತ ವರ್ಷ ಕಿಸಾನ್ ಕ್ರೆಡಿಟ್ ಯೋಜನೆಯಡಿ ಜಿಲ್ಲೆಯ 1.10 ಲಕ್ಷ ರೈತರಿಗೆ 1,250 ಕೋಟಿ ರೂ. ಸಾಲ ವಿತರಿಸಲಾಗಿದೆ. 
ಶೇ.3 ಬಡ್ಡಿಯಲ್ಲಿ ಒಂದು ಸಾವಿರ ರೈತರಿಗೆ ಮಧ್ಯಮಾವಧಿ ಸಾಲ ನೀಡಲಾಗಿದೆ. ತಾಲೂಕಿನ ಬಸವಾನಿ ಪಿಎಸಿಎಸ್ ಸೇರಿ 7 ಸಂಘಗಳಿಗೆ ಬಡ್ಡಿ ರಹಿತ ಅರ್ಥಿಕ ನೆರವು ನೀಡಲಾಗಿದೆ. ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಎಲೆಚುಕ್ಕೆ ರೋಗದ ಬಾಧೆ ನಿವಾರಣೆಗೆ ಒಂದು ರೂಪಾಯಿಯನ್ನೂ ಅನುದಾನ ಮೀಸಲಿಟ್ಟಿಲ್ಲ ಎಂದು ದೂರಿದರು.
ಬ್ಯಾಂಕಿನ ನಿರ್ದೇಶಕ ಎಚ್.ಎನ್.ವಿಜಯದೇವ್, ಪಪಂ ಅಧ್ಯಕ ರತ್ನಾಕರ ಶೆಟ್ಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net