ಸರ್ಕಾರಿ ನೌಕರಿ ಮಾಯೆ ಕೋಟ್ಯಂತರ ರೂ. ಮಾಯ | Fake appointment order

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ.
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ.
Published on

ಪ್ರಮುಖ ಮುಖ್ಯಾಂಶಗಳು

  • ಮಲೆನಾಡಿನಲ್ಲಿ ಬೆಳಕಿಗೆ ಬಂದ 53 ಜನರಿಗೆ ವಂಚನೆ ಪ್ರಕರಣ
  • ಇಬ್ಬರ ಬಂಧನ, ತಲೆಮರೆಸಿಕೊಂಡ ಮೂವರು ಆರೋಪಿಗಳು
  • 1.20ರಿಂದ 8.50 ಲಕ್ಷ ರೂ.ವರೆಗೆ ವಿವಿಧ ಹುದ್ದೆಗಾಗಿ ಹಣ ಕೊಟ್ಟು ಬೇಸ್ತು
ಶಿವಮೊಗ್ಗ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ನಕಲಿ ನೇಮಕಾತಿ ಆದೇಶ(Fake appointment order)ಗಳನ್ನು ನೀಡಿ ಮಲೆನಾಡಿನ 53 ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಭದ್ರಾವತಿಯ ಹೊಸಮನೆ ನಿವಾಸಿ ರೂಪಾ ರವೀಂದ್ರ ರಾವ್ ನೀಡಿದ ದೂರಿನ ಮೇರೆಗೆ ಸಚಿನ್, ಸ್ವಪ್ನಾ, ಸುಜಾತಾ, ಕೇಶವ ಹಾಗೂ ಶಾಲಿನಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಸಚಿನ್ ಪ್ರಕರಣದ ರೂವಾರಿಯಾಗಿದ್ದು, ಆತ ಮತ್ತು ಆತನ ಸಂಬಂಧಿ, ಬೆಂಗಳೂರಿನ ಸುಜಾತಾ ಎಂಬುವರನ್ನು ಬಂಧಿಸಲಾಗಿದೆ.
‘2025ರ ಸೆಪ್ಟೆಂಬರ್‌ನಲ್ಲಿ ಸ್ನೇಹಿತೆ ಜಯಶ್ರೀ ಎಂಬುವರ ಮೂಲಕ ಶಿವಮೊಗ್ಗದ ದುರ್ಗಿಗುಡಿ 3ನೇ ಕ್ರಾಸ್‌ನ ಸಚಿನ್ ಅವರ ಪರಿಚಯವಾಗಿತ್ತು. ಸರ್ಕಾರಿ ಉದ್ಯೋಗ(Government job)ಗಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸುವುದಾಗಿ ಆತ ಭರವಸೆ ನೀಡಿದ್ದ. ಒಬ್ಬರಿಗೆ 5.50 ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದು, ತನ್ನ ಮಗನಿಗೆ ಎಸ್‌ಡಿಎ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ’ ಎಂದು ರೂಪಾ ದೂರಿದ್ದಾರೆ.
2025ರ ಸೆ.12ರಂದು ತಮ್ಮ ಕೆನರಾ ಬ್ಯಾಂಕ್ ಖಾತೆ(Bank Account)ಯಿಂದ ಸಚಿನ್ ಖಾತೆಗೆ 1.50 ಲಕ್ಷ ರೂ., ನಂತರ ಮತ್ತೊಮ್ಮೆ ಚೆಕ್ ಮೂಲಕ 1.50 ಲಕ್ಷ ರೂ., ಬಳಿಕ 90 ಸಾವಿರ ರೂ. ಅನ್ನು ಮತ್ತೊಂದು ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಫೋನ್ ಪೇ(Phone Pay)ಹಾಗೂ ನಗದು ರೂಪದಲ್ಲೂ ಹಣ ಪಾವತಿಸಿದ್ದು, ಒಟ್ಟಾರೆ 8,50,330 ರೂ. ನೀಡಿರುವುದಾಗಿ ರೂಪಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಜಾತಾ ಮತ್ತು ಸ್ವಪ್ನಾ ಎಂಬವರು ತರಬೇತಿ ನೀಡುತ್ತಿದ್ದು, ಅಭ್ಯರ್ಥಿಗಳ ಹಾಜರಾತಿ ಪಡೆದು ಹಣ ಸಂಗ್ರಹಿಸುತ್ತಿದ್ದರು. ಕೇಶವ ಎಂಬಾತ ಎಇಇ ಹುದ್ದೆ ಪರೀಕ್ಷೆ ಹೇಗೆ ಬರೆಯಬೇಕೆಂಬ ಮಾಹಿತಿ ನೀಡುತ್ತಿದ್ದ. ಶಾಲಿನಿ ಡಿಸಿ ಕಚೇರಿ(DC Office)ಯಲ್ಲಿ ಆರ್‌ಐ(ಕಂದಾಯ ನಿರೀಕ್ಷಕ) ಹುದ್ದೆ ಕೊಡಿಸುವುದಾಗಿ ಹೇಳಿದ್ದರು. ಇದಾದ ಬಳಿಕ ಮಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಉದ್ಯೋಗ ದೊರೆತಿದೆ ಎಂದು ತೋರಿಸಿ 2026ರ ಏ.24ರಂದು ಸರ್ಕಾರಿ ಲೋಗೋ ಹೊಂದಿರುವ ನಕಲಿ ನೇಮಕಾತಿ ಆದೇಶ ಪತ್ರವನ್ನೂ ನೀಡಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ಕಾಯಿಸಿದರೂ ಕೆಲಸಕ್ಕೆ ಸೇರಿಸದೆ ವಿವಿಧ ಕಾರಣ ಹೇಳಿ ಕಾಲಹರಣ ಮಾಡಿದ್ದರು ಎಂದು ದೂರಿದ್ದಾರೆ.
ಸಚಿನ್ ಅವರ ದುರ್ಗಿಗುಡಿ ಕಚೇರಿ(Durgigudi Office)ಗೆ ತೆರಳಿದಾಗ ತಮ್ಮಂತೆಯೇ ಅನೇಕ ಮಂದಿ ಉದ್ಯೋಗದ ನಿರೀಕ್ಷೆಯಲ್ಲಿ ಹಣ ನೀಡಿ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಬಳಿಕ ಪರಸ್ಪರ ಮಾಹಿತಿ ಹಂಚಿಕೊಂಡಾಗ ಹಲವರಿಂದ ಉದ್ಯೋಗದ ಹೆಸರಿನಲ್ಲಿ ಲಕ್ಷಾಂತರ ರೂ. ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ನೇರ ನೇಮಕಾತಿ ಮಾಡಿಸಿಕೊಡುವುದಾಗಿ ನಂಬಿಸಿ ವಿವಿಧ ಇಲಾಖೆಗಳ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ 1.20 ಲಕ್ಷ ರೂ.ನಿಂದ 8.50 ಲಕ್ಷ ರೂ.ವರೆಗೆ ಹಣ ಪಡೆದು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸ್ ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net