ಸಾಗರದ ಗಾಂಧಿನಗರದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಜನ್ಮದಿನದ ಅಂಗವಾಗಿ ಗೀತ ಗಾಯನ ಕಾರ್ಯಕ್ರಮವನ್ನು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಉದ್ಘಾಟಿಸಿ ಮಾತನಾಡಿದರು. ನರಸಿಂಹಮೂರ್ತಿ, ದೇವೇಂದ್ರ ಬೆಳೆಯೂರು, ಬಂದಗದ್ದೆ ರಾಧಾಕೃಷ್ಣ, ದೀಪಕ್ ಸಾಗರ ಇದ್ದರು.
Published on:
Copied
Follow Us
ಸಾಗರ: ಸಮಾಜವಾದಿ ಸಿದ್ಧಾಂತಗಳ ಬಗ್ಗೆ ಒಲವು ಹೊಂದಿದ್ದ ಕವಿ ಗೋಪಾಲಕೃಷ್ಣ ಅಡಿಗರು ಎಂಥದ್ದೇ ಸಂಕಷ್ಟ ಎದುರಾದರೂ ಸತ್ಯದ ಬೆನ್ನೇರಿ ಬದುಕಿದರು. ಅವರ ಕಾವ್ಯಗಳಲ್ಲಿ ವ್ಯಂಗ್ಯ, ವ್ಯವಸ್ಥೆಯ ವಿಡಂಬನೆ ಕಾಣುತ್ತೇವೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಸಾಗರದ ಗಾಂಧಿನಗರದಲ್ಲಿ ವೇದನಾದ ಪ್ರತಿಷ್ಠಾನದ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸೀಯ ಸಂಗೀತ ವಿದ್ಯಾಲಯವು ಕವಿ ಗೋಪಾಲಕೃಷ್ಣ ಅಡಿಗರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಡಿಗರ ಗೀತ ಗಾಯನ, ಕಾವ್ಯವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
60ರ ದಶಕದಲ್ಲಿ ಸಾಗರದ ಲಾಲ್ ಬಹದ್ದೂರ್ ಕಾಲೇಜಿಗೆ ಪ್ರಥಮ ಪ್ರಾಚಾರ್ಯರಾಗಿ ಅಡಿಗರು ಬಂದಾಗ ಕಾವ್ಯವನ್ನು ಓದುವ, ಸಾಹಿತ್ಯವನ್ನು ಪರಿಚಯಿಸುವ ಒಂದು ದೊಡ್ಡ ವಾತಾವರಣವನ್ನೇ ಅವರು ನಿರ್ಮಾಣ ಮಾಡಿದರು. ನಾವೆಲ್ಲ ಅವರ ನೇರ ಶಿಷ್ಯರು ಎಂಬುದು ಹೆಮ್ಮೆಯ ಸಂಗತಿ. ಕನ್ನಡ ನಾಡು, ನುಡಿ ಕುರಿತಂತೆ ತಮ್ಮ ಕಾವ್ಯದಲ್ಲಿ ಸ್ಪಷ್ಟ ಕಲ್ಪನೆ ಇದ್ದಂತಹ ಅಡಿಗರನ್ನು ಇಂದು ಎಲ್ಲ ವಿಶ್ವವಿದ್ಯಾಲಯ, ಶಾಲಾ ಕಾಲೇಜುಗಳಲ್ಲಿ ತಿಳಿಸುವಂತಹ ಕೆಲಸ ಆಗಬೇಕು ಎಂದರು.
ಅಡಿಗರು ಸಮ ಸಮಾಜದ ಕನಸು ಕಂಡವರು. ಸಮಾಜವಾದಿ ರಾಮ ಮನೋಹರ ಲೋಹಿಯಾ ಅವರ ಚಿಂತನೆಗಳನ್ನು ಅನುಸರಿಸುತ್ತಿದ್ದರು. ಅದಕ್ಕೆ ನಮ್ಮ ಮಲೆನಾಡು ಭಾಗದಲ್ಲಿ ಆಗ ನಡೆಯುತ್ತಿದ್ದ ಹೋರಾಟಗಳು ಅವರಿಗೆ ಸ್ಫೂರ್ತಿ ನೀಡಿರಬಹುದು. ಹೊಸ ತಲೆಮಾರಿನ ಬಗ್ಗೆ ಅವರಿಗಿದ್ದ ಕಾಳಜಿ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಸದಾ ಸೆಟೆದು ನಿಲ್ಲುವ ಅವರ ಮನಸ್ಥಿತಿ ಕಾವ್ಯಗಳ ಮೂಲಕ ಹೊರಹೊಮ್ಮಿದೆ ಎಂದು ತಿಳಿಸಿದರು.
ಚಿಂತಕ ದೇವೇಂದ್ರ ಬೆಳೆಯೂರು ಮಾತನಾಡಿ, ಅಡಿಗರು ಸದಾ ಸಮಾಜವನ್ನು ಎಚ್ಚರಿಸುತ್ತ ಬಂದರು. ರಾಜಕಾರಣಿಗಳ ವಿರುದ್ಧ, ಅಧಿಕಾರಸ್ಥರ ವಿರುದ್ಧ ಬಂಡಾಯ ಸಾರುತ್ತಲೇ ಬಂದರು. ಅವರ ಕಾವ್ಯಗಳಲ್ಲಿ ಮೂಡಿ ಬರುವ ಸಾತ್ವಿಕ ಆಕ್ರೋಶ ಬದುಕನ್ನು ಸದಾ ಎಚ್ಚರದಲ್ಲಿಡುತ್ತದೆ. ಇಂದಿನ ಆಧುನಿಕತೆ ಸೃಷ್ಟಿಸಿದ ಅವಾಂತರವನ್ನು ತಮ್ಮ ಕಾವ್ಯಗಳಲ್ಲಿ ತೆರೆದಿಟ್ಟಿದ್ದಾರೆ ಎಂದರು.
ವಿದುಷಿ ವಸುಧಾ ಶರ್ಮ, ಸಂವತ್ಸರ, ಸಾಹಿತಿ ವಿ.ಗಣೇಶ್, ಶ್ರೀರಂಜಿನಿ ಇತರರಿದ್ದರು. ಗಾಯಕ ಭದ್ರಪ್ಪ ಗೌಡ, ಸಹನಾ ಜಿ ಭಟ್ ಅಡಿಗರ ಗೀತೆಗಳನ್ನು ಹಾಡಿದರು. ಸಾಹಿತಿ ಬಂದಗದ್ದೆ ರಾಧಾಕೃಷ್ಣ, ಪತ್ರಕರ್ತ ದೀಪಕ್ ಸಾಗರ, ಗೋಪಾಲಕೃಷ್ಣ ಅಡಿಗರ ಕವನಗಳನ್ನು ವಾಚಿಸಿದರು.
ಸಾಹಿತ್ಯ-ಸಂಗೀತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಗಾಯಕರು ಎರಡನ್ನೂ ಅಭ್ಯಾಸ ಮಾಡಬೇಕು. ಮುಂಬರುವ ದಿನಗಳಲ್ಲಿ ಜೆ.ಪಿ.ರಾಜರತ್ನಂ, ಪು.ತಿ.ನರಸಿಂಹಾಚಾರ್, ಡಾ. ಜಿ.ಎಸ್.ಶಿವರುದ್ರಪ್ಪ, ಕುವೆಂಪು, ಬೇಂದ್ರೆ ಮುಂತಾದ ಕವಿಗಳ ಗೀತ ಗಾಯನದ ಅಧ್ಯಯನ ಶಿಬಿರ ನಡೆಸುವ ಚಿಂತನೆ ಇದೆ.