ಸಾಗರ: ನಾನು ಮೂರು ಬಾರಿ ಗೆದ್ದಿರುವ ಹಿರಿಯ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಶಾಸಕ. ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಅಗತ್ಯವಿದ್ದರೆ ಸಚಿವ ಸ್ಥಾನಕ್ಕಾಗಿ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಸಚಿವ ಸ್ಥಾನ ಕೊಡಿ ಎಂದು ದೆಹಲಿಗೆ ಹೋದಾಗ ವರಿಷ್ಠರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಬಳಿಯೂ ಕೇಳಿದ್ದೇನೆ. ನನ್ನ ಹಕ್ಕನ್ನು ಕೇಳಲು ಯಾವುದೇ ಮುಜುಗರ ಇಲ್ಲ ಎಂದರು.
ನಮ್ಮ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ನಾನು ಹಿಂದಿನಿಂದಲೂ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಬದಲಾವಣೆ, ಸಚಿವರ ಬದಲಾವಣೆ ಶಾಸಕರ ಕೈನಲ್ಲಿ ಇಲ್ಲ. ಎಲ್ಲವೂ ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ. ಸರ್ಕಾರ ಐದು ವರ್ಷ ಸುಸೂತ್ರವಾಗಿ ನಡೆಯಬೇಕು ಎನ್ನುವುದು ಎಲ್ಲರ ಆಕಾಂಕ್ಷೆ ಎಂದು ಹೇಳಿದರು.
ಸಾಗರ ಜಿಲ್ಲೆ ಮಾಡಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಜತೆಗೆ ಅವರನ್ನು ಭೇಟಿಯಾಗಿ ಜಿಲ್ಲೆ ಮಾಡುವುದಾದರೆ ಸಾಗರವನ್ನು ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ಮನವಿ ಮಾಡಿದ್ದೇನೆ. ಯಾವ ಕಾರಣಕ್ಕೂ ಶಿಕಾರಿಪುರವನ್ನು ಜಿಲ್ಲೆಯನ್ನಾಗಿ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಚೇತನರಾಜ್ ಕಣ್ಣೂರು, ಗಣಪತಿ ಮಂಡಗಳಲೆ, ಮಧುಮಾಲತಿ, ರವಿ ಲಿಂಗನಮಕ್ಕಿ, ಕಿರಣ್, ಚಂದ್ರು ಇತರರಿದ್ದರು.