ರಸ್ತೆಗಾಗಿ ಆಸ್ತಿ ಕಳೆದುಕೊಂಡವರಿಗೆ ಹಕ್ಕುಪತ್ರ ಕೊಡಿ

ಶಿಕಾರಿಪುರ ಬಸ್ ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಿವೃತ್ತ ಶಿಕ್ಷಕ ದುರ್ಗಪ್ಪ ಅವರನ್ನು ಸನ್ಮಾನಿಸಲಾಯಿತು. ಸುನಂದಾ ಮಂಜುನಾಥ್, ರೂಪಾ, ನಾಗರಾಜ್ ಗೌಡ, ರಮೇಶ್, ಭರತ್ ಇತರರಿದ್ದರು.
ಶಿಕಾರಿಪುರ ಬಸ್ ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಿವೃತ್ತ ಶಿಕ್ಷಕ ದುರ್ಗಪ್ಪ ಅವರನ್ನು ಸನ್ಮಾನಿಸಲಾಯಿತು. ಸುನಂದಾ ಮಂಜುನಾಥ್, ರೂಪಾ, ನಾಗರಾಜ್ ಗೌಡ, ರಮೇಶ್, ಭರತ್ ಇತರರಿದ್ದರು.
Published on
ಶಿಕಾರಿಪುರ: ಪಟ್ಟಣದ ಶಿರಾಳಕೊಪ್ಪ ವೃತ್ತದ ಬಳಿ ಇರುವ ಐಟಿಐ ಕಾಲೇಜು ಹಾಗೂ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ರಸ್ತೆ ನಿರ್ಮಿಸುವ ಸಲುವಾಗಿ 2008-09ರಲ್ಲಿ ಕೆಲವು ಖಾಸಗಿ ಸ್ವತ್ತುಗಳಿಗೆ ಹಾನಿಯಾಗಿದೆ. ಈ ಸಂತ್ರಸ್ತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.
ಶುಕ್ರವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಸ್ಪಿ ನಾಗರಾಜ ಗೌಡ, ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಇದುವರೆಗೆ ಆಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಶೀಘ್ರ ನಿಗಾವಹಿಸಿ ಅವರಿಗೆ ಹಕ್ಕುಪತ್ರ ಕೊಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಸ್ ನಿಲ್ದಾಣ ಹತ್ತಿರದ ಕೋಳಿ ಅಂಗಡಿಗಳಿಂದಾಗಿ ಈ ಭಾಗದಲ್ಲಿ ಓಡಾಡುವ ಮಹಿಳೆಯರು, ಮಕ್ಕಳಿಗೆ ತುಂಬ ಕಿರಿಕಿರಿ ಆಗುತ್ತಿದೆ. ಕೂಡಲೇ ಕೋಳಿಯ ಕೇಜ್‌ಗಳನ್ನು ಅಂಗಡಿಯ ಒಳಭಾಗದಲ್ಲಿ ಇರಿಸಬೇಕು ಹಾಗೂ ಫುಟ್‌ಪಾತ್ ತೆರವುಗೊಳಿಸಬೇಕು ಎಂದು ಲಕ್ಷ್ಮೀ ಮಹಾಲಿಂಗಪ್ಪ ಆಗ್ರಹಿಸಿದರು.
ಉಳ್ಳಿ ದರ್ಶನ್ ಮಾತನಾಡಿ, ಕೆಲವು ಭಾಗದಲ್ಲಿ ಪುರಸಭಾ ಸ್ವತ್ತುಗಳು ಒತ್ತುವರಿಯಾಗಿವೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಹೊನ್ನಾಳಿ ರಸ್ತೆಯಲ್ಲಿರುವ ಸ್ಮಶಾನವನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಪಟ್ಟಣದ ಪರೋಪಕಾರಂ ತಂಡದವರು ಸಭೆಯಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಮನವಿಯನ್ನು ಪುರಸ್ಕರಿಸಲಾಯಿತು. ಇ-ಸ್ವತ್ತು ವಿತರಣೆಯಲ್ಲಿ ವಿಳಂಬ, ಶುಚಿತ್ವವಿಲ್ಲದ ಶೌಚಗೃಹ ಸೇರಿ ಹಲವು ವಿಷಯಗಳ ಚರ್ಚೆ ನಡೆಯಿತು.
ಪೌರ ಕಾರ್ಮಿಕರಿಗೆ ಕುಕ್ಕರ್ ವಿತರಣೆ: ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಪುರಸಭೆಯಿಂದ ಉಚಿತ ಕುಕ್ಕರ್ ಕೊಡುವ ಕುರಿತು ಟೆಂಡರ್ ಕರೆದಿದ್ದು, ಇದುವರೆಗೆ ವಿತರಣೆ ಮಾಡದಿರಲು ಕಾರಣವೇನು ಎಂದು ಸುರೇಶ್ ಪಿ. ರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಸುನಂದಾ ಮಂಜುನಾಥ್, ಕುಕ್ಕರ್‌ಗಳ ಸಾಮರ್ಥ್ಯ 5 ಲೀಟರ್ ಇರಬೇಕಿತ್ತು. ಆದರೆ ನಾಲ್ಕೂವರೆ ಲೀಟರ್ ಇರುವುದು ತನಿಖೆಯಲ್ಲಿ ಬಹಿರಂಗಗೊಂಡ ಕಾರಣ, ಸದರಿ ಪೂರೈಕೆದಾರರ ಪೂರೈಕೆಯನ್ನು ನಿಲ್ಲಿಸಲಾಗಿದೆ. ಗುಣಮಟ್ಟದ ಹಾಗೂ 5 ಲೀ. ಸಾಮರ್ಥ್ಯದ ಕುಕ್ಕರ್ ನೀಡಲು ಸೂಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪುರಸಭಾ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಮುಖ್ಯಾಧಿಕಾರಿ ಭರತ್, ರಾಜಕುಮಾರ್, ಸದಸ್ಯರಾದ ಪಾಲಾಕ್ಷಪ್ಪ, ಗೋಣಿ ಪ್ರಕಾಶ್, ಪ್ರಶಾಂತ್ ಜೀನಳ್ಳಿ, ರೂಪಕಲಾ ಹೆಗಡೆ, ರೇಖಾ ಬಾಯಿ, ರೋಷನ್, ರಾಘವೇಂದ್ರ, ಫೈರೋಜಾ ಬಾನು, ರೇಣುಕಸ್ವಾಮಿ, ನಗರದ ರವಿಕಿರಣ್, ವಿಜಯ್ಕುಮಾರ್, ಸುರೇಶ್, ವ್ಯವಸ್ಥಾಪಕ ರಾಜ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net