ಹೊಸನಗರ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪ್ರಾಮಾಣಿಕವಾಗಿ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ, ತಾಲೂಕು ಆರೋಗ್ಯಾಧಿಕಾರಿ ಡಾ. ದಿನೇಶ್ ಅವರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿರುವ ಪ್ರೋತ್ಸಾಹಧನದ ಪ್ರಮುಖ ಚಟುವಟಿಕೆಗಳ ಷಡ್ಯೂಲ್ಗಳನ್ನು ಮತ್ತು ಇತರ ಕುಟುಂಬ ಕಲ್ಯಾಣ ಸೇವೆಗಳು ಸೇರಿ ಒಟ್ಟು ಒಂಬತ್ತು ಪ್ರಮುಖ ಸೇವೆಗಳನ್ನು ಆಶಾ ನಿಧಿ ತಂತ್ರಾಂಶಗಳು ಏಕಾಏಕಿ ನಿಶ್ಚಯಗೊಳಿಸಲಾಗಿದೆ. ಇದರಿಂದ ಆಶಾ ಕಾರ್ಯಕರ್ತೆಯರ ಜೀವನ ನಿರ್ವಹಣೆ ದುಸ್ತರವಾಗಿದೆ ಎಂದು ದೂರಿದರು.
ಈ ಚಟುವಟಿಕೆಗಳಿಗೆ ಪ್ರೋತ್ಸಾಹಧನ ಇಲ್ಲದಿದ್ದರೂ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಬೆದರಿಸಿ ಕೆಲಸ ಮಾಡಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿನ ಇಂತಹ ಬೆದರಿಕೆ ಕ್ರಮವನ್ನು ನಿಲ್ಲಿಸಬೇಕು. ಉಲ್ಲೇಖಿತ ಪತ್ರದಲ್ಲಿ ನಮೂದಿಸಿರುವ 9 ಚಟುವಟಿಕೆಗಳನ್ನು ಸದ್ಯಕ್ಕೆ ಆಶಾ ಕಾರ್ಯಕರ್ತರಿಂದ ಮಾಡಿಸಬಾರದು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರ ತಾಲೂಕು ಸಂಘದ ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ಸುಮಾ, ಸವಿತಾ, ನಾಗರತ್ನ, ಸುಮಾ, ರೇಖಾ, ಸತ್ಯಾ, ಚಿತ್ರಾ, ರೇಖಾ ಇತರಿರದ್ದರು.