ಸಾಗರ: ಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು. ವೈದ್ಯ, ಇಂಜಿನಿಯರ್ ಸೇರಿ ಉನ್ನತ ಹುದ್ದೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತೇವೆ ಎನ್ನುವ ಸಂಕಲ್ಪವನ್ನು ಕಾರ್ಮಿಕರು ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಉಪಕರಣಗಳು ಮತ್ತು ಸುರಕ್ಷಾ ಕಿಟ್ ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅವರ ಬದುಕು ಹಸನುಗೊಳಿಸಿ ಎಂದರು.
ದೇಶ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದು. ಪ್ರತಿ ನಿರ್ಮಾಣ, ಅಭಿವೃದ್ಧಿ ಕೆಲಸಗಳ ಹಿಂದೆ ನಿಮ್ಮ ಶ್ರಮ ಇರುತ್ತದೆ. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದ್ಬಳಕೆ ಮಾಡಿಕೊಳ್ಳಿ. ಕಾರ್ಮಿಕರಲ್ಲದವರು ಕಾರ್ಮಿಕ ಕಾರ್ಡ್ ಪಡೆದು ನಿಮಗೆ ಸಿಗಬೇಕಾದ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಗಮನಹರಿಸಿ ಎಂದು ತಿಳಿಸಿದರು.
ಕುಟುಂಬ ಪಿಂಚಣಿ, ಹೆರಿಗೆಗೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ, ವೈದ್ಯಕೀಯ, ಮಕ್ಕಳ ಮದುವೆಗೆ ಸಹಾಯಧನ ಸೇರಿ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡಿ. ಯೋಜನೆಗಳು ಅರ್ಹ ಕಾರ್ಮಿಕರಿಗೆ ತಲುಪಬೇಕು. ಕಾರ್ಮಿಕರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು. ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು.