ಎಂಎಡಿಬಿಗೆ 200 ಕೋಟಿ ರೂ. ಅನುದಾನ ನೀಡಿ I two hundred crores

 ಎಂಎಡಿಬಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಆರ್.ಎಂ.ಮಂಜುನಾಥ ಗೌಡ, ಟಿ.ಡಿ.ರಾಜೇಗೌಡ, ಬಸವರಾಜ ನೀಲಪ್ಪನವರ್, ಜಿ.ಅನುರಾಧಾ, ಚಂದ್ರಶೇಖರ್ ಇದ್ದರು.
ಎಂಎಡಿಬಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಆರ್.ಎಂ.ಮಂಜುನಾಥ ಗೌಡ, ಟಿ.ಡಿ.ರಾಜೇಗೌಡ, ಬಸವರಾಜ ನೀಲಪ್ಪನವರ್, ಜಿ.ಅನುರಾಧಾ, ಚಂದ್ರಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ
  • ಕಾಮಗಾರಿ ಕ್ರಿಯಾಯೋಜನೆ ಮಾರ್ಗಸೂಚಿಗೆ ವಿರೋಧ
ಶಿವಮೊಗ್ಗ: ಎಂಎಡಿಬಿ (madb) (ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ) ಸರ್ವ ಸದಸ್ಯರ ಸಾಮಾನ್ಯ ಸಭೆ (meeting) ಯಲ್ಲಿ ಅನುದಾನದ ಬೇಡಿಕೆ ಬಗ್ಗೆ ಮತ್ತೆ ಧ್ವನಿ ಎದ್ದಿದೆ. ಪ್ರತಿ ಸದಸ್ಯರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ವಾರ್ಷಿಕ ಕನಿಷ್ಠ ಎರಡು ಕೋಟಿ ರೂ. ಕಾಮಗಾರಿ ಕೈಗೊಳ್ಳಲು ಅನುಕೂಲವಾಗುವಂತೆ ಮಂಡಳಿಗೆ ವರ್ಷಕ್ಕೆ 200 ಕೋಟಿ ರೂ. ಅನುದಾನ (grant) ನೀಡುವಂತೆ ಸರ್ವ ಸದಸ್ಯರು ಒತ್ತಾಯಿಸಿದ್ದಾರೆ.
2018ರಲ್ಲಿ ವಾರ್ಷಿಕ ಒಂದು ಕೋಟಿ ರೂ. ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ ಪ್ರಸ್ತುತ ಓರ್ವ ಶಾಸಕರಿಗೆ ಸಿಗುತ್ತಿರುವ ವಾರ್ಷಿಕ ಅನುದಾನ 37 ಲಕ್ಷ ರೂ. ಮಾತ್ರ. ಇದರಲ್ಲಿ ಹೆಚ್ಚಿನ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಂಡಳಿಗೆ ವಾರ್ಷಿಕ 200 ಕೋಟಿ ರೂ. ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಶಿವಮೊಗ್ಗದಲ್ಲಿರುವ ಎಂಎಡಿಬಿ ಕಚೇರಿ ಮಲೆನಾಡು ಸಿರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರಮುಖವಾಗಿ ಹೆಚ್ಚಿನ ಅನುದಾನ ಹಾಗೂ ಕ್ರಿಯಾ ಯೋಜನೆ ಕುರಿತು ವಿರೋಧ ಕೇಳಿ ಬಂತು. ಅನುದಾನ ಹಂಚಿಕೆಯಲ್ಲಿ ಸರ್ಕಾರದ ವಿವೇಚನೆಯ ಪ್ರಮಾಣಕ್ಕಿಂತಲೂ ಮಂಡಳಿಯ ಅಧ್ಯಕ್ಷರಿಗೆ ಹೆಚ್ಚಿನ ವಿವೇಚನೆ ನೀಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಪ್ರಸ್ತುತ ಸರ್ಕಾರದ ವಿವೇಚನಾ ನಿಧಿ ಶೇ.10 ಹಾಗೂ ಅಧ್ಯಕ್ಷರ ವಿವೇಚನಾ ನಿಧಿ ಶೇ.5 ನಿಗದಿಯಾಗಿದೆ. ಈ ನಿಬಂಧನೆ ಬದಲಾಯಿಸಿ ಸರ್ಕಾರಕ್ಕೆ ಶೇ.5ರಷ್ಟು ವಿವೇಚನೆ ಹಾಗೂ ಅಧ್ಯಕ್ಷರಿಗೆ ಶೇ.10 ವಿವೇಚನೆ ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಿ.ಅನುರಾಧ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಬ್ಯಾಡಗಿ ಶಾಸಕ ಬಸವರಾಜ ನೀಲಪ್ಪನವರ್, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ಹೊನ್ನಾಳಿ ಶಾಸಕ ಡಿ.ಜಿ.ಶಾಂತನ ಗೌಡ, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ಅಬ್ದುಲ್ ಜಬ್ಬಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.


ಒಂದು ಕೋಟಿ ರೂ.ಗೆ ಪ್ರಯತ್ನಿಸಬಹುದು

ಮಂಡಳಿಯ ಸದಸ್ಯರಿಗೆ ವಾರ್ಷಿಕ ಎರಡು ಕೋಟಿ ರೂ. ಅನುದಾನ ಕೊಡುವಂತೆ ಸರ್ಕಾರದ ಮನವೊಲಿಸುವುದು ಕಷ್ಟವಾಗಬಹುದು. ಆದರೆ ಒಂದು ಕೋಟಿ ರೂ. ಅನುದಾನ ಪಡೆಯಲು ಕಷ್ಟವಾಗಲಾರದು ಎಂದು ಆರ್.ಎಂ.ಮಂಜುನಾಥ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಚ್ಚಿನ ಅನುದಾನ ನೀಡುವಂತೆ ಹಲವು ವರ್ಷಗಳಿಂದಲೂ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಪ್ರಯೋಜನವಾಗಿಲ್ಲ. ಈಗ ಮಂಡಳಿಗೆ ವಾರ್ಷಿಕ 38 ಕೋಟಿ ರೂ. ಅನುದಾನ ಸಿಗುತ್ತಿದೆ. ಮಂಡಳಿಯ ವಿಶಾಲ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ಇದರಿಂದ ತೊಡಕಾಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು ಭರವಸೆ ನೀಡಿದರು.

ತಾಲೂಕಿಗೆ ಒಂದು ಕೋಟಿ ಬೇಕು

ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿ ರೂ. ನೀಡುವ ಬದಲು ತಾಲೂಕಿಗೆ ಒಂದು ಕೋಟಿ ರೂ. ನೀಡಬೇಕೆಂದು ಡಿ.ಜಿ.ಶಾಂತನಗೌಡ ಬೇಡಿಕೆ ಮುಂದಿಟ್ಟರು. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ನ್ಯಾಮತಿ ಪ್ರತ್ಯೇಕ ತಾಲೂಕಾಗಿ ರಚನೆಯಾಗಿದೆ. ಅಲ್ಲಿಯೂ ಅಭಿವೃದ್ಧಿ ಮಾಡಲು ಒಂದು ಕೋಟಿ ರೂ. ಅನುದಾನ ಸಾಲುವುದಿಲ್ಲ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸಿ.ಟಿ.ರವಿ, ನಿಮ್ಮ ಪರಿಸ್ಥಿತಿಯೇ ಹೀಗಾದರೆ ಬೋಜೇಗೌಡರಿಗೆ ಎಷ್ಟು ಕೋಟಿ ರೂ. ಬೇಕಾಗಬಹುದು? ಎಂದು ಚಟಾಕಿ ಹಾರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net