ಹೆಸರು ಬದಲಾವಣೆಯಿಂದ ಗಾಂಧಿಗೆ ಅಪಮಾನ | Road Construction
ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಸದಾನಂದ ಗೌಡ, ಕೆ.ಪಿ.ಗೌಡ, ಮಂಜುಳಾ ಹೆಗಡಾಳ್ ಇತರರಿದ್ದರು.
ಆನವಟ್ಟಿ: ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಬಡಜನರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾಯಿಸಿ ಈಗಿನ ಬಿಜೆಪಿ ಸರ್ಕಾರ ಗಾಂಧೀಜಿಗೆ ಅಪಮಾನ ಮಾಡಲು ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದೂರಿದರು.
ಆನವಟ್ಟಿ ಸಮೀಪದ ಕುಬಟೂರು ಗ್ರಾಮದಲ್ಲಿ ಮಂಗಳವಾರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕರೊನಾ ನಂತರ ಗ್ರಾಮೀಣ ಜನರ ಉದ್ಯೋಗಕ್ಕೆ ಆಸರೆಯಾಗಿತ್ತು. ಇದೀಗ ಯೋಜನೆಗೆ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿ ಗಾಂಧೀಜಿ ಹೆಸರನ್ನು ತೆಗೆದುಹಾಕಲು ಹುನ್ನಾರ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆನವಟ್ಟಿ ಪಪಂ ವ್ಯಾಪ್ತಿಯಲ್ಲಿ 58 ಕೊಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಕುಬಟೂರು ನನ್ನ ಸ್ವಗ್ರಾಮ. ಗ್ರಾಮದಲ್ಲಿ ಒಟ್ಟು 5 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆ. ಮೊದಲ ಹಂತದಲ್ಲಿ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ಗೌಡ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ತಾಪಂ ಇಒ ಶಶಿಧರ, ಬಿಇಒ ಪುಷ್ಪಾ, ಮುಖಂಡರಾದ ಪರಮೇಶ್ವರಪ್ಪ, ಉಮೇಶ್, ಶಂಕರ್ ರಾವ್, ಗಂಗಣ್ಣ, ಮಧುಕೇಶ್ವರ ಪಾಟೀಲ್, ಸುರೇಶ್ ಹಾವಣ್ಣನವರ್, ಹಬೀಬುಲ್ಲಾ, ಗಿರೀಶ್ ಗೌಡ ಇತರರಿದ್ದರು.