ಉತ್ತಮ ನಡವಳಿಕೆಯಿಂದ ಪುಣ್ಯ ಪ್ರಾಪ್ತಿ | Religious programme

ಸೊರಬ ತಾಲೂಕಿನ ಹೆಚ್ಚೆ  ಹೊಸಕೊಪ್ಪ ಗ್ರಾಮದಲ್ಲಿ ಅಷ್ಟಲಕ್ಷ್ಮೀ ದೇವಿ, ಗುತ್ಯಮ್ಮ ದೇವಿ, ನಾಗ ಚೌಡೇಶ್ವರಿ ದೇವಿ ಮರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀ ಭಾಗವಹಿಸಿದ್ದರು. ಶ್ರೀಧರ್ ಶೇಟ್, ಪ್ರಕಾಶ್ ಶೇಟ್, ಬಸವರಾಜ್ ಶೇಟ್ ಇತರರಿದ್ದರು.
ಸೊರಬ ತಾಲೂಕಿನ ಹೆಚ್ಚೆ ಹೊಸಕೊಪ್ಪ ಗ್ರಾಮದಲ್ಲಿ ಅಷ್ಟಲಕ್ಷ್ಮೀ ದೇವಿ, ಗುತ್ಯಮ್ಮ ದೇವಿ, ನಾಗ ಚೌಡೇಶ್ವರಿ ದೇವಿ ಮರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀ ಭಾಗವಹಿಸಿದ್ದರು. ಶ್ರೀಧರ್ ಶೇಟ್, ಪ್ರಕಾಶ್ ಶೇಟ್, ಬಸವರಾಜ್ ಶೇಟ್ ಇತರರಿದ್ದರು.
Published on
ಸೊರಬ: ಜೀವನದಲ್ಲಿ ಒಳ್ಳೆಯ ನಡೆ, ನುಡಿ ರೂಢಿಸಿಕೊಳ್ಳವ ಮೂಲಕ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದು ಕರ್ಕಿ ದೈವಜ್ಞ ಮಠದ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿ ಹೆಚ್ಚೆ ಹೊಸಕೊಪ್ಪ ಗ್ರಾಮದಲ್ಲಿ ಬುಧವಾರ ಅಷ್ಟಲಕ್ಷ್ಮೀ ದೇವಿ, ಗುತ್ಯಮ್ಮ ದೇವಿ, ನಾಗ ಚೌಡೇಶ್ವರಿ ದೇವಿಯ ಮರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಲ್ಲರಿಗೂ ಪುಣ್ಯದ ಫಲ ಬೇಕು. ಆದರೆ ಪುಣ್ಯದ ಕೆಲಸ ಮಾಡುವುದಿಲ್ಲ. ಯಾರೂ ಪಾಪದ ಫಲ ಬಯಸುವುದಿಲ್ಲ. ಆದರೆ ಪಾಪದ ಕೆಲಸ ಮಾಡುವುದನ್ನು ಬಿಡುವುದಿಲ್ಲ. ನಾವು ಎಷ್ಟು ದುರ್ದೈವದಲ್ಲಿ ಬಾಳುತ್ತಿದ್ದೇವೆ ಎಂದರೆ ನಾವು ಇವತ್ತು ಮಾಡುವ ದೇವತಾ ಕಾರ್ಯಗಳು ದೇವರಿಗಾಗಿ ಅಲ್ಲ. ದೇವರ ಪ್ರೇರಣೆಗಾಗಿ ನಾವು ದೇವತಾ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.
ಭಗವಾನ್ ಶ್ರೀಧರ ಸ್ವಾಮಿಗಳು ಈ ಲೋಕದ ಹೆಸರೇ ಮೃತ್ಯುಲೋಕ ಎಂದು ಕರದಿದ್ದಾರೆ. ಮನುಷ್ಯ ಹುಟ್ಟಿದ ಮೇಲೆ ಮರಣ ಹೊಂದಲೇಬೇಕು. ಹುಟ್ಟು-ಸಾವು ಎರಡೂ ನಿಶ್ಚಿತ. ನಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಶಾಶ್ವತವಾಗಿ ಇಲ್ಲೇ ಇರುತ್ತದೆ. ಹಾಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.
ಯಾವಾಗ ಜನರಿಗೆ ಉಪಕಾರಿಯಾಗಿ, ಸಮಾಜಕ್ಕೆ ಅನುಕೂಲವಾಗುವ ಕೆಲಸ ಮಾಡುತ್ತೇವೋ ಆವಾಗ ಜನ ನಮ್ಮನ್ನು ಸ್ಮರಿಸುತ್ತಾರೆ. ದ್ವೇಷ, ಅಸೂಯೆ ಗುಣಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಸೇರುತ್ತೇವೆ. ಇದುವೇ ಪ್ರತಿಷ್ಠಾಪನೆ. ನಮ್ಮಲ್ಲಿರುವ ಕಾಮ, ಕ್ರೋಧ, ದ್ವೇಷವನ್ನು ಬಿಟ್ಟು ಭಗವಂತನ ನಾಮಸ್ಮರಣೆ ಮಾಡುತ್ತ ಕೆಲಸ ಮಾಡಬೇಕು ಎಂದರು.
ಅಷ್ಟಲಕ್ಷ್ಮೀ ನಾಗಚೌಡೇಶ್ವರಿ ಗುತ್ಯಮ್ಮ ದೇವಿಗೆ ಶಾಂತಿ ಹೋಮ, ಮರು ಪ್ರತಿಷ್ಠಾಪನಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು. ಭಕ್ತರಿಗೆ ಶ್ರೀಗಳು ಫಲಾಮಂತ್ರಾಕ್ಷತೆ ವಿತರಿಸಿ ಆಶೀರ್ವದಿಸಿದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿತು.
ಸುಲೋಚನಮ್ಮ ಭಾಸ್ಕರ್ ಶೇಟ್, ಶ್ರೀಧರ್ ಶೇಟ್, ಪ್ರಕಾಶ್ ಶೇಟ್, ಬಸವರಾಜ್ ಶೇಟ್, ಎಸ್.ಜಿ ರಾಮಚಂದ್ರ, ಮಧುರಾಯ ಜಿ ಶೇಟ್, ಶ್ರೀಕಾಂತ್ ಶೇಟ್, ಗೋಪಿನಾಥ್ ಗೋಕುಲ. ಲಕ್ಷ್ಮೀನಾರಾಯಣ, ವಸಂತ ಶೇಟ್. ಗಣಪತಿ ಶೇಟ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net