ಅಸ್ತಿತ್ವದಲ್ಲೇ ಇಲ್ಲದ ಊರುಗಳನ್ನು ಸೃಷ್ಟಿಸಿ ಅರಣ್ಯ ಘೋಷಣೆ I forest announcemnet

ತೀ.ನ.ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ
ತೀ.ನ.ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ
Published on

ಪ್ರಮುಖ ಮುಖ್ಯಾಂಶಗಳು

  • ಕಸ್ತೂರಿ ರಂಗನ್ ವರದಿ ಬಗ್ಗೆ ಜನಪ್ರತಿನಿಧಿಗಳ ಮೌನ
  • ಸಮಿತಿ ಹೋರಾಟಗಾರ ತೀ.ನ.ಶ್ರೀನಿವಾಸ್ ಟೀಕೆ
ಶಿವಮೊಗ್ಗ: ಉಪಗ್ರಹ ಆಧಾರಿತ ಸಮೀಕ್ಷೆ ನಡೆಸಿರುವ ಕಸ್ತೂರಿ ರಂಗನ್ (kasturi rangan) ವರದಿ ಮಲೆನಾಡು (malenadu) ಜನರ ಪಾಲಿಗೆ ಮರಣ ಶಾಸನವಾಗಿದೆ. ಈ ವರದಿ (report) ಕಸದ ಬುಟ್ಟಿಗೆ ಹಾಕಲಷ್ಟೇ ಯೋಗ್ಯ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಿಂದ ನೀಡಿದ ಸುಮಾರು 50 ಸಾವಿರ ಎಕರೆ ಕೃಷಿ ಜಮೀನನ್ನು ಅರಣ್ಯ ಎಂದು ಘೋಷಿಸಲಾಗಿದೆ. 1840 ರಿಂದ 1930ರವರೆಗೆ ಈ ಪ್ರದೇಶಗಳನ್ನು ಅರಣ್ಯವೆಂದು ಘೋಷಿಸಿ ದಾಖಲೆ ಮಾಡಲಾಗಿದೆ. ಯತಿಬೈಲು, ಸೀತನಳ್ಳಿ, ಹುಲಿಬನ, ದೇಸಗುಡ್ಡ, ಮೂಡೂರು ಎಂದು ಈ ಹಿಂದೆ ಅಸ್ತಿತ್ವದಲ್ಲೇ ಇಲ್ಲದ ಗ್ರಾಮದ ಹೆಸರುಗಳನ್ನು ಸೃಷ್ಟಿಸಿ ಅರಣ್ಯವೆಂದು ಘೋಷಿಸಲಾಗಿದೆ. ನೆಲ್ಲಿನ ಬೆಟ್ಟ, ಕಾನು, ಜಾಡಿ ಭಾಗದಲ್ಲಿ ಜನವಸತಿ ಇದ್ದರೂ ಅರಣ್ಯವೆಂದು ಘೋಷಿಸಲಾಗಿದೆ ಎಂದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
2006ರ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ, 40 ಸಾವಿರ ಅರ್ಜಿಗಳು ಬಾಕಿ ಇವೆ. 1978ರ ಪೂರ್ವದ ಅರಣ್ಯ ಒತ್ತುವರಿದಾರರಿಗೆ ತಲಾ 3 ಎಕರೆ ಅರಣ್ಯ ಭೂಮಿ ಮಂಜೂರು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ 8 ಆದೇಶಗಳನ್ನು ಹೊರಡಿಸಿದ್ದರೂ ಜಾರಿಯಾಗಿಲ್ಲ ಎಂದು ಹೇಳಿದರು.
ಪಶ್ಚಿಮ ಘಟ್ಟದ ಬಗ್ಗೆ ತಜ್ಞರ ಸಮಗ್ರ ಅಧ್ಯಯನವಿಲ್ಲದೆ, ವೈಜ್ಞಾನಿಕ ಆಧಾರವಿಲ್ಲದೆ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಲಾಗಿದೆ. ಇದು ಮಲೆನಾಡಿಗರ ಮೂಲಭೂತ ಹಕ್ಕಿಗೆ ಭಂಗ ತರುವಂತಿದೆ. ಕಳೆದ 10 ವರ್ಷಗಳಿಂದ ಮಲೆನಾಡಿನಲ್ಲಿ ಏನು ನಡೆಯುತ್ತಿದೆ ಎಂಬ ಅರಿವಿಲ್ಲದೆ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಸಂಸದ ಬಿ.ವೈ.ರಾಘವೇಂದ್ರ ನಾಲ್ಕು ಬಾರಿ ಸಂಸದರಾದರೂ ಸದನದಲ್ಲಿ ಕಸ್ತೂರಿ ರಂಗನ್ ವರದಿ ಸೇರಿ ಮಲೆನಾಡು ಭಾಗದ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಆದರೆ ಈಗ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜಂಟಿ ಸರ್ವೇ ಆಗಬೇಕು ಎನ್ನುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರು ಕೂಡ ವಿಧಾನಸಭೆಯಲ್ಲಿ ಚರ್ಚಿಸದೆ ಈಗ ಹೋರಾಟದ ನೆಪದಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಅಶೋಕ್ ಜಂಭಳ್ಳಿ, ಮಂಜಪ್ಪ, ಚಕ್ರಪಾಣಿ, ರವಿ ಭಟ್ಟ, ವಿನಯ್, ಕೃಷ್ಣಪ್ಪ, ಸುಗಂಧರಾಜ್, ದೇವೇಂದ್ರ, ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net