ಅಂಬೇಡ್ಕರ್ ವಿಚಾರಗಳನ್ನು ಅನುಸರಿಸಿ | Camp closing ceremony

ಹೊಸಬಾಳೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪ್ರದರ್ಶಿಸಿದ ಶ್ರೀಕೃಷ್ಣ ದರ್ಶನ ಯಕ್ಷಗಾನದ ಒಂದು ದೃಶ್ಯ.
ಹೊಸಬಾಳೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪ್ರದರ್ಶಿಸಿದ ಶ್ರೀಕೃಷ್ಣ ದರ್ಶನ ಯಕ್ಷಗಾನದ ಒಂದು ದೃಶ್ಯ.
Published on
ಸೊರಬ: ಅಂಬೇಡ್ಕರ್ ಅವರು ಅಸಮಾನತೆಯ ಕಾಯಿಲೆಗೆ ಮದ್ದು. ಮಹಿಳೆಯರು, ಮಕ್ಕಳು ಮತ್ತು ಅಂಚಿನ ಸಮುದಾಯಗಳ ಸಮಾನತೆಯ ಬದುಕಿಗೆ ಅವರ ಕೊಡುಗೆ ಅಪಾರ. ಅವರ ವಿಚಾರಗಳು ನಮಗೆ ದಾರಿದೀಪವಾಗಬೇಕು ಎಂದು ಭೀಮ ಶಾಲೆಯ ಸಂಸ್ಥಾಪಕ ನವೀನ್ ತೇಜಸ್ವಿ ಹೇಳಿದರು.
ತಾಲೂಕಿನ ಹೊಸಬಾಳೆ ಗ್ರಾಮದ ಭೀಮ ಶಾಲೆಯ ಮೂರನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅವರು ತೋರಿದ ದಾರಿಯಲ್ಲಿ ನಾವು, ನಮ್ಮ ಮಕ್ಕಳು ಸಮಾಜವನ್ನು ಮತ್ತಷ್ಟು ಸಮಾನತೆಗೆ ತರಲು ದುಡಿಯಬೇಕು ಎಂದರು.
ಹೊಸಬಾಳೆಯ ಮಹಿಳೆಯರು ಮತ್ತು ಮಕ್ಕಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವುಗಳನ್ನು ಅರ್ಪಿಸುವ ಮೂಲಕ ಭೀಮ ಹಬ್ಬವನ್ನು ಉದ್ಘಾಟಿಸಿದರು. ಊರಿನ ಹಿರಿಯರಿಂದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬೇಸಿಗೆ ಶಿಬಿರದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 40 ಮಕ್ಕಳು ಭಾಗವಹಿಸಿದ್ದರು.
ಮಕ್ಕಳಿಗೆ ವಿಜ್ಞಾನ, ಡೊಳ್ಳು, ನಾಟಕ, ಯಕ್ಷಗಾನ ಕಲಿಸಲಾಯಿತು. ಬೆಂಗಳೂರಿನ ರಾಜೇಶ್ ಅವರು ವಿಜ್ಞಾನದ ಮುಖೇನ ಆಟದ ಸಾಮಗ್ರಿ ಮಾಡುವುದನ್ನು ಕಲಿಸುವ ಮೂಲಕ ಪವಾಡ ಬಯಲು ಪ್ರದರ್ಶಿಸಿ ಮಕ್ಕಳಿಗೆ ವೈಜ್ಞಾನಿಕ ಮನೋಭಾವದ ಪ್ರಾಮುಖ್ಯತೆ ತಿಳಿಸಿದರು. ಡಾ. ಬಾಗಿಲ ರಾಮಪ್ಪ ಕುಗ್ವೆ ಅವರು ಡೊಳ್ಳು ಕುಣಿತವನ್ನು, ಮಹಾಬಲಗಿರಿ ಅಮಚಿ ಅವರು ಯಕ್ಷಗಾನವನ್ನು ಕಲಿಸಿದರು. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮೈತ್ರಿ’ ಸಿನಿಮಾದ ಕಲಾವಿದ ಆದಿತ್ಯ ಅವರು ಮಕ್ಕಳಿಗೆ ನಾಟಕ ಕಲಿಸಿದರು.
ಶಿಬಿರದ ಕೊನೆಯ ದಿನವಾದ ಶನಿವಾರ ಮಕ್ಕಳು ತಾವು ಕಲಿತ ಕಲೆಗಳ ಪ್ರದರ್ಶನ ನೀಡಿದರು. ಹೊಸಬಾಳೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸಬಾಳೆ ಮತ್ತು ಅಕ್ಕಪಕ್ಕದ ಊರಿನ 500ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮಕ್ಕಳು ಡೊಳ್ಳು ಕುಣಿತ, ಚಾಡಿ ಮುಪ್ಪೇ? ಎಂಬ ಮಕ್ಕಳ ನಾಟಕ ಮತ್ತು ಶ್ರೀಕೃಷ್ಣ ದರ್ಶನ ಮತ್ತು ಶ್ರೀದೇವಿ ದರ್ಶನ ಎಂಬ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net