ಕ್ಷೇತ್ರ ಮರು ಸ್ಥಾಪನೆಗೆ ವಿಶೇಷ ಮಾನದಂಡ ಅನುಸರಿಸಿ I special gideline

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶುಕ್ರವಾರ ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶುಕ್ರವಾರ ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜನರ ಭಾವನೆಗಳನ್ನು ಗೌರವಿಸಬೇಕು
  • ಹೊಸನಗರ ಕ್ಷೇತ್ರ ರಚನೆಗೆ ಬಗ್ಗೆ ಸಂಸದ ಬಿವೈಆರ್ ಸಂಸತ್‌ನಲ್ಲಿ ಪ್ರಸ್ತಾಪ
ಶಿವಮೊಗ್ಗ: ಕ್ಷೇತ್ರ ಪುನರ್ವಿಂಗಡಣೆ ಸಮಯದಲ್ಲಿ ಹೊಸನಗರ (hosanagara) ತಾಲೂಕಿಗೆ ನ್ಯಾಯ (justice) ನೀಡಬೇಕು. ಆ ತಾಲೂಕಿನ ಜನರಿಗೆ ನ್ಯಾಯ ಒದಗಿಸಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಸಂಸತ್‌ನಲ್ಲಿ ಗಮನಸೆಳೆದಿದ್ದಾರೆ.
ನಾರಿ ಶಕ್ತಿ ವಂದನಾ ಅಧಿನಿಯಮ ಜಾರಿಗೆ ಸಂಬಂಧಿಸಿ ನಡೆಯುತ್ತಿರುವ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಶುಕ್ರವಾರ ಮಾತನಾಡಿರುವ ಅವರು. ಹೊಸನಗರ ತಾಲೂಕಿನ ಭೌಗೋಳಿಕ ವ್ಯಾಪ್ತಿ ಹಾಗೂ ಅಲ್ಲಿನ ಜನರು ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಆಗ್ರಹಿಸಿ ಇತ್ತೀಚೆಗೆ ಹೊಸನಗರದಲ್ಲಿ ನಡೆದ ಬೃಹತ್ ಪಾದಯಾತ್ರೆಯನ್ನು ಉಲ್ಲೇಖಿಸಿರುವ ಅವರು, ಸ್ವತಂತ್ರ ಅಸ್ತಿತ್ವ ಹೊಂದಿದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು 2004ರಲ್ಲಿ ವಿಭಜಿಸಲಾಯಿತು. ಹೀಗಾಗಿ ಆ ಭಾಗದ ಜನರಿಗೆ ಪ್ರಾತಿನಿಧ್ಯದ ಕೊರತೆ ಉಂಟಾಗಿದೆ ಎಂದಿದ್ದಾರೆ.
ಶರಾವತಿ, ವಾರಾಹಿ ನದಿಗಳ ಮೂಲವಾಗಿರುವ, ಮಲೆನಾಡಿನ ಕಠಿಣ ಭೂಪ್ರದೇಶ ಹೊಂದಿರುವ ಹೊಸನಗರಕ್ಕೆ ವಿಶೇಷ ಭೌಗೋಳಿಕ ಮಾನ್ಯತೆ ನೀಡಬೇಕು. ನಾಡಿನ ಅಭಿವೃದ್ಧಿಗಾಗಿ ಐದು ಜಲಾಶಯ ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡಿರುವ ಸಂತ್ರಸ್ತ ಕುಟುಂಬಗಳ ಹಿತದೃಷ್ಟಿಯಿಂದ ಹೊಸನಗರವನ್ನು ಮತ್ತೆ ಸ್ವತಂತ್ರ ಕ್ಷೇತ್ರವನ್ನಾಗಿ ಮಾಡುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಅದು ಆ ಭಾಗದ ಜನರ ತ್ಯಾಗಕ್ಕೆ ನೀಡುವ ನ್ಯಾಯ ಮತ್ತು ಗೌರವ ಎಂದು ಉಲ್ಲೇಖಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನಂತಹ ವಿಶಾಲ ಅರಣ್ಯ, ಗಿರಿ-ಪರ್ವತಗಳ ಪ್ರದೇಶ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ ಭಾಗಗಳಿಗೆ, ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ವಿಶೇಷ ಮಾನದಂಡಗಳನ್ನು ಅನುಸರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಾನು ಬಸವಣ್ಣನವರು ಉದಯಿಸಿದ ನಾಡಿನಿಂದ ಬಂದವನು. 12ನೇ ಶತಮಾನದಲ್ಲೇ ಬಸವಣ್ಣನವರು ಲಿಂಗ ಸಮಾನತೆಯ ಸಂದೇಶ ಸಾರಿದ್ದರು. ಅಕ್ಕಮಹಾದೇವಿ ಅವರ ಆಧ್ಯಾತ್ಮಿಕ ಶಕ್ತಿ, ಕಿತ್ತೂರು ಚನ್ನಮ್ಮ ಮತ್ತು ಒನಕೆ ಓಬವ್ವ ಅವರ ಕೆಚ್ಚೆದೆಯ ಸಾಹಸ ನಮ್ಮ ನಾರಿ ಶಕ್ತಿಗೆ ಪ್ರೇರಣೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ನಾರಿ ಶಕ್ತಿ ವಂದನಾ ಅಧಿನಿಯಮದಿಂದ ಐತಿಹಾಸಿಕ ಪರಂಪರೆಗೆ ಗೌರವ ದೊರೆತಿದೆ. ದೇಶದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲಿದೆ. ಅಡುಗೆ ಮನೆಯಿಂದ ಸಂಸತ್‌ವರೆಗೆ ಮಹಿಳೆಯರ ಧ್ವನಿ ಬಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net