ಎಂಟು ಜಿಲ್ಲೆಗಳಲ್ಲಿ ಎಫ್‌ಎಂ ಮಾರ್ದನಿ I fm districts

 ಶಿವಮೊಗ್ಗದ ವಿದ್ಯಾನಗರದಲ್ಲಿರುವ ಭದ್ರಾವತಿ ಆಕಾಶವಾಣಿ ಎಫ್‌ಎಂಗೆ ಅಳವಡಿಸಲಾದ 10 ಕಿಲೋ ವಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರನ್ನು ಲೋಕಾರ್ಪಣೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಾ.ಎಲ್.ಮುರುಗನ್ ಉದ್ಘಾಟಿಸಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಪ್ರಭುಲಿಂಗ ಕವಳಿಕಟ್ಟಿ, ಬಿ.ಗೋಪಿನಾಥ್, ರಾಜೇಂದ್ರ ಕುಮಾರ್ ಜೈನ್, ಗೀತಾ ರಾಣಿ, ಕೆ.ಜಿ.ಕುಮಾರಸ್ವಾಮಿ ಇದ್ದರು.
ಶಿವಮೊಗ್ಗದ ವಿದ್ಯಾನಗರದಲ್ಲಿರುವ ಭದ್ರಾವತಿ ಆಕಾಶವಾಣಿ ಎಫ್‌ಎಂಗೆ ಅಳವಡಿಸಲಾದ 10 ಕಿಲೋ ವಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರನ್ನು ಲೋಕಾರ್ಪಣೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಾ.ಎಲ್.ಮುರುಗನ್ ಉದ್ಘಾಟಿಸಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಪ್ರಭುಲಿಂಗ ಕವಳಿಕಟ್ಟಿ, ಬಿ.ಗೋಪಿನಾಥ್, ರಾಜೇಂದ್ರ ಕುಮಾರ್ ಜೈನ್, ಗೀತಾ ರಾಣಿ, ಕೆ.ಜಿ.ಕುಮಾರಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇದೊಂದು ಐತಿಹಾಸಿಕ ಹೆಜ್ಜೆ
  • 10 ಕಿಲೋವಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆ
  • ಕೇಂದ್ರ ಮಾಹಿತಿ-ಪ್ರಸಾರ ಸಚಿವ ಮುರುಗನ್ ಹೇಳಿಕೆ
ಶಿವಮೊಗ್ಗ: ಇದೀಗ ಭದ್ರಾವತಿ ಆಕಾಶವಾಣಿ (akashavani) ಎಫ್‌ಎಂ (fm) ಗೆ 10 ಕಿಲೋವಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಸಿ ಮೇಲ್ದರ್ಜೆಗೇರಿಸುವ ಮೂಲಕ ಮಲೆನಾಡು (malenadu) ಮಾತ್ರವಲ್ಲ, ಮಧ್ಯ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರ ವಿಶೇಷ ಕೊಡುಗೆ ನೀಡಿದೆ. ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಡಾ. ಎಲ್.ಮುರುಗನ್ ಹೇಳಿದರು.
ವಿದ್ಯಾನಗರದಲ್ಲಿರುವ ಭದ್ರಾವತಿ ಆಕಾಶವಾಣಿ ಎಫ್‌ಎಂಗೆ ಅಳವಡಿಸಲಾದ 10 ಕಿಲೋವಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರನ್ನು ಗುರುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭದ್ರಾವತಿ ಆಕಾಶವಾಣಿಯ ಎಫ್‌ಎಂನ್ನು ಮೇಲ್ದರ್ಜೆಗೇರಿಸುವ ಮೂಲಕ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ದೃಢ ಹೆಜ್ಜೆ ಇರಿಸಲಾಗಿದೆ ಎಂದರು.
ಇನ್ಮುಂದೆ ಭದ್ರಾವತಿ ಎಫ್‌ಎಂ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಸುತ್ತಲಿನ 8 ಜಿಲ್ಲೆಗಳನ್ನು ತಲುಪಲಿದೆ. ರೇಡಿಯೋ ಒಂದು ಶಕ್ತಿಯುತವಾದ ಸಂವಹನ ಮಾಧ್ಯಮ. ಕೇಂದ್ರ ಸರ್ಕಾರವು ಡಿಜಿಟಲ್ ಮತ್ತು ಸಂವಹನ ಮಾಧ್ಯಮಗಳ ಮೂಲ ಸೌಕರ್ಯಗಳ ಅಭಿವೃದ್ದಿ ಮತ್ತು ಗುಣಮಟ್ಟ ವೃದ್ಧಿಗಾಗಿ ಕಳೆದ ವರ್ಷ 2,500 ಕೋಟಿ ರೂ. ಅನುದಾನ ಖರ್ಚು ಮಾಡಿದೆ ಎಂದು ತಿಳಿಸಿದರು.
ಪ್ರಸಾರ ಭಾರತಿ ಮಹಾನಿರ್ದೇಶಕ ರಾಜೇಂದ್ರಕುಮಾರ್ ಜೈನ್, ದಕ್ಷಿಣ ವಲಯ ಅಪರ ಮಹಾನಿರ್ದೇಶಕಿ ಗೀತಾ ರಾಣಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಭದ್ರಾವತಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಎಸ್.ಆರ್.ಭಟ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಇತರರಿದ್ದರು.

ಸಂಸದರ ಬದ್ಧತೆಗೆ ಶ್ಲಾಘನೆ

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೆಹಲಿಯಲ್ಲಿದ್ದ ಎಲ್ಲ ದಿನವೂ ಯಾರಾದರೂ ಸಚಿವರನ್ನು ಭೇಟಿಯಾಗುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದಾದರೂ ಬೇಡಿಕೆ, ಮನವಿಯೊಂದಿಗೆ ದೆಹಲಿಗೆ ಬರುತ್ತಾರೆ. ರೈಲ್ವೆ, ಹೈವೆ, ವಿಮಾನಯಾನ, ಕೃಷಿ, ಕೈಗಾರಿಕೆ ಹೀಗೆ ಯಾವುದೇ ಸಚಿವರೊಂದಿಗೆ ಚರ್ಚಿಸಿ ಏನಾದರೊಂದು ಯೋಜನೆಯನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಮುರುಗನ್ ಹೇಳುತ್ತಿದ್ದಂತೆ ಸಭೆಯಲ್ಲಿ ಕರತಾಡನ ಕೇಳಿಬಂತು. ಇದಕ್ಕೂ ಮುನ್ನ ಮಾತನಾಡಿದ ಎಸ್.ಎನ್.ಚನ್ನಬಸಪ್ಪ ಕೂಡಾ ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಷಯದಲ್ಲಿ ತಂದೆ ಯಡಿಯೂರಪ್ಪ ಅವರಿಗೆ ಸಮನಾಗಿ ಕೆಲಸ ಮಾಡಿರುವ ರಾಘವೇಂದ್ರ ಅಭಿವೃದ್ಧಿಯ ಹರಿಕಾರ. ಅವರು ಯೋಜನಾಬದ್ಧವಾಗಿ ಕೆಲಸ ಮಾಡಿ ಜನತೆಯ ಅಪೇಕ್ಷೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.


ಗುಡ್ಡೇಕಲ್ ದೇವಸ್ಥಾನಕ್ಕೆ ಸಹಕಾರ

ಶಿವಮೊಗ್ಗ ಹೊರವಲಯದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಡಾ. ಎಲ್.ಮುರುಗನ್ ಭರವಸೆ ನೀಡಿದರು. ದೆಹಲಿಯಲ್ಲಿದ್ದಾಗ ಬಿ.ವೈ.ರಾಘವೇಂದ್ರ ನನ್ನನ್ನು ಭೇಟಿಯಾಗಿ ಈ ವಿಷಯ ಚರ್ಚಿಸಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸಂಸ್ಕೃತಿ ಸಚಿವರ ಮೂಲಕ ಪಡೆಯುವ ಪ್ರಯತ್ನ ನಡೆದಿದೆ. ಈ ವಿಷಯದಲ್ಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ವಿಕಸಿತ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ವಿಕಸಿತ ಭಾರತಕ್ಕಾಗಿ ವಿಕಸಿತ ಶಿವಮೊಗ್ಗ ನಿರ್ಮಾಣವಾಗುತ್ತಿದೆ. ಇದೀಗ ಭದ್ರಾವತಿ ಎಫ್‌ಎಂ ಕೇಂದ್ರ ಮೇಲ್ದರ್ಜೆಗೇರಿದೆ. ಇನ್ನು ಮೂರ‌್ನಾಲ್ಕು ತಿಂಗಳಲ್ಲಿ ಇದೇ ಸ್ಥಳದಲ್ಲಿ ಕಾರ್ಯಕ್ರಮಗಳ ಧ್ವನಿ ಮುದ್ರಣ ಆರಂಭವಾಗಲಿದೆ. ಇಲ್ಲಿಯೇ ಸುಸಜ್ಜಿತ ಸ್ಟೂಡಿಯೋ ನಿರ್ಮಾಣವಾಗಿದೆ. ಧ್ವನಿ ಮುದ್ರಣಕ್ಕಾಗಿ ಭದ್ರಾವತಿಗೆ ತೆರಳುವ ಅವಶ್ಯಕತೆ ಇರುವುದಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. 10 ಕಿವಾ ಟ್ರಾನ್ಸ್‌ಮೀಟರ್ ಅಳವಡಿಕೆಗೆ 2024ರ ಜನವರಿಯಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ಈಗ ಕಾರ್ಯಪೂರ್ಣವಾಗಿದೆ. ಶಿವಮೊಗ್ಗದ ಸುತ್ತಲಿನ ಎಂಟು ಜಿಲ್ಲೆಗಳ ಸುಮಾರು ಒಂದು ಕೋಟಿ ಜನ ಆಲಿಸಲಿದ್ದಾರೆ. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಭದ್ರಾವತಿ ಆಕಾಶವಾಣಿಗೆ ಇದು ಉಡುಗೊರೆ ಎಂದರು. ಇಲ್ಲಿ ದೂರದರ್ಶನ ಕೇಂದ್ರದ ಗೋಪುರ ಪ್ರಯೋಜನಕ್ಕೆ ಬಾರದೆ ಕಡೆಗಣನೆಗೆ ಒಳಗಾಗಿತ್ತು. ಇದನ್ನು ಬಳಸಿಕೊಂಡು ಭದ್ರಾವತಿ ಆಕಾಶವಾಣಿಗೆ ಶಕ್ತಿ ತುಂಬುವ ನಿರ್ಧಾರ ಮಾಡಲಾಗಿತ್ತು ಎಂದು ಹೇಳಿದರು.

ಬಿಎಸ್‌ವೈಗೆ ಈ ಕೊಡುಗೆ

ಮೂರು ವರ್ಷಗಳ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಜನ್ಮದಿನದಂದೇ ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟನೆಯಾಯ್ತು. ಈಗ ಅವರ ಜನ್ಮದಿನದ ಮುನ್ನಾ ದಿನ ಭದ್ರಾವತಿ ಎಫ್‌ಎಂ ಮೇಲ್ದರ್ಜೆಗೇರಿ ಉದ್ಘಾಟನೆಯಾಗಿದೆ. ಇದು ಬಿಎಸ್‌ವೈ ಜನ್ಮದಿನಕ್ಕೆ ಕೊಡುಗೆ. ಯಡಿಯೂರಪ್ಪ ಸಂಸದರಾಗಿದ್ದಾಗ ಮೊದಲ ಬಾರಿ ಕಾರ್ಯಕ್ಕೆ ಪ್ರಯತ್ನ ಆರಂಭಿಸಿದರು. ಅದನ್ನು ನಾನು ಮುಂದುವರಿಸಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಪಾರ್ಕ್‌ಗಳಲ್ಲಿ ಇನ್ಮುಂದೆ ಎಫ್‌ಎಂ

ಮುಂಬರುವ ದಿನಗಳಲ್ಲಿ ಶಿವಮೊಗ್ಗ ಎಲ್ಲ ಪಾರ್ಕ್‌ಗಳಲ್ಲಿ ಭದ್ರಾವತಿ ಆಕಾಶವಾಣಿ ಎಫ್‌ಎಂ ಕಾರ್ಯಕ್ರಮಗಳನ್ನು ಸಾರ್ವಜನಿಕರು ಕೇಳಲು ಅವಕಾಶ ಕಲ್ಪಿಸಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ಇದಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯವಿಲ್ಲ 8-10 ಸಾವಿರ ರೂ.ನಲ್ಲಿ ಒಂದು ಪಾರ್ಕ್‌ಗೆ ಈ ವ್ಯವಸ್ಥೆ ಮಾಡಬಹುದು. ಹಣವನ್ನು ನಾವು ಹೊಂದಿಸುತ್ತೇವೆ. ಅವಕಾಶ ನೀಡಿ ಎಂದು ಡಾ. ಎಲ್.ಮುರುಗನ್ ಅವರಲ್ಲಿ ಮನವಿ ಮಾಡಿದರು. ಮುರುಗನ್ ಮಾತನಾಡುವ ವೇಳೆ ಚನ್ನಬಸಪ್ಪ ಅವರ ಬೇಡಿಕೆಯನ್ನು ಈಡೇರಿಸಲಾಗುವುದು. ಶಿವಮೊಗ್ಗದ ಪಾರ್ಕ್‌ಗಳಲ್ಲಿ ಆಕಾಶವಾಣಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ಆಲಿಸಲು ಪೈಲಟ್ ಯೋಜನೆ ರೂಪಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net