ಕೆರೆ ಬೇಟೆ ತಾಲೂಕಿನ ಉಳವಿ, ಕುಪ್ಪಗಡ್ಡೆ ಮತ್ತು ಕಸಬಾ ಹೋಬಳಿಗಳ ವ್ಯಾಪಿಯಲ್ಲಿ ಹೆಚ್ಚು ಕಂಡುಬರುತ್ತಿತ್ತು. ಆದರೆ ಈ ಬಾರಿ ತಾಲೂಕಿನ ಎಲ್ಲೆಡೆ ಕೆರೆಬೇಟೆಯ ಸಂಭ್ರಮ ಮನೆಮಾಡಿರುತ್ತದೆ. ತಲಗಡ್ಡೆಯ ಊರ ಮುಂದಿನ ಕೆರೆ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದು. 111 ಎಕರೆ ವಿಸ್ತೀರ್ಣ ಇರುವ ಈ ಕೆರೆಯ ಅರ್ಧದಷ್ಟು ಭಾಗದಲ್ಲಿ ನೀರಿತ್ತು. ಶನಿವಾರ ರಾತ್ರಿ ಸುರಿದ ಮಳೆಯಿಂದ ಇನ್ನಷ್ಟು ನೀರು ತುಂಬಿಕೊಂಡಿತ್ತು. 1977ರಿಂದ ಈ ಕೆರೆಯಲ್ಲಿ ಮೀನು ಶಿಕಾರಿಯೇ ನಡೆದಿರಲಿಲ್ಲ. ಹಾಗಾಗಿ ಭಾರಿ ಮೀನುಗಳು ಇರುತ್ತವೆ ಎಂದು ಬೇಟೆಗಾರರು ಬಂದಿದ್ದರು. ಆದರೆ ಕೆರೆಯಲ್ಲಿ ದೊಡ್ಡ ಗಾತ್ರದ ಅಂದರೆ 8, 10, 15, 20 ಕೆ.ಜಿ. ತೂಕ ಮೀನುಗಳು ಇದ್ದು ಕೆಲವೇ ಜನರಿಗೆ ಸಿಕ್ಕಿವೆ. ಸಣ್ಣ ಮೀನುಗಳು ವಿರಳವಾಗಿದ್ದರಿಂದ ಬಹಳಷ್ಟು ಮಂದಿ ಬರಿಗೈಲಿ ನಿರಾಸೆಯಿಂದ ವಾಪಸ್ ತೆರಳಿದರು.