ವಾಹನ ವಶಕ್ಕೆ ಪಡೆದು ಸೇವಾನ್ಯೂನತೆ ಎಸಗಿದ ಫೈನಾನ್ಸ್‌ಗೆ ದಂಡ | Fine on finance company

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿ.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿ.
Published on

ಪ್ರಮುಖ ಮುಖ್ಯಾಂಶಗಳು

  • ದೂರುದಾರರ ಹೆಸರಿಗೆ ವರ್ಗಾಯಿಸದೆ ಮತ್ತು ಸೂಕ್ತ ಮಾಹಿತಿ ನೀಡದ ಫೈನಾನ್ಸ್‌
  • ಶಿವಮೊಗ್ಗ ಶಂಕರಮಠ ರಸ್ತೆಯ ಫೈನಾನ್ಸ್‌ ವಿರುದ್ಧ ದೂರು ಸಲ್ಲಿಸಿದ್ದ ಕುಸ್ಕೂರಿನ ನಿಖಿಲ್
  • ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ
ಶಿವಮೊಗ್ಗ: ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸದೆ ಮತ್ತು ಸೂಕ್ತ ಮಾಹಿತಿ ನೀಡದೆ ವಾಹನ ವಶಕ್ಕೆ ಪಡೆದು ಸೇವಾನ್ಯೂನತೆ(Deficiency in service) ಎಸಗಿದ ಫೈನಾನ್ಸ್‌ಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 1.10 ಲಕ್ಷ ರೂ.ದಂಡ ಪಾವತಿಸುವಂತೆ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕಿನ ಕುಸ್ಕೂರಿನ ಆರ್.ನಿಖಿಲ್ ಎಂಬುವರು ಶಿವಮೊಗ್ಗದ ಶಂಕರಮಠ ರಸ್ತೆ(Shankaramatha Road)ಯ ಫೈನಾನ್ಸ್‌ವೊಂದರ ವಿರುದ್ಧ ದೂರು ಸಲ್ಲಿಸಿದ್ದರು. ಫಯಾಜ್ ಎಂಬುವರ ಹೆಸರಿನಲ್ಲಿದ್ದ ಸರಕು ಸಾಗಣೆ ವಾಹನ ಖರೀದಿಸಿದ್ದ ನಿಖಿಲ್ ಅವರು ಫೈನಾನ್ಸ್‌ನಿಂದ 13.50 ಲಕ್ಷ ರೂ. ಸಾಲವನ್ನು 48 ಕಂತುಗಳಲ್ಲಿ ಪಾವತಿಸಲು ಮಂಜೂರು ಮಾಡಿಸಿಕೊಂಡಿದ್ದರು.
ವಾಹನವನ್ನು ದೂರುದಾರರ ಹೆಸರಿಗೆ ಆರ್‌ಟಿಒ ಮೂಲಕ ವರ್ಗಾಯಿಸಿಕೊಡಲು ತಗಲುವ ವೆಚ್ಚವನ್ನು ಫೈನಾನ್ಸ್ ಪಡೆದಿದ್ದರೂ ಹೆಸರು ವರ್ಗಾವಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿತ್ತು. ನಿಖಿಲ್ ಅವರು ವಾಹನ ಉಪಯೋಗಿಸದೇ 90 ಸಾವಿರ ರೂ. ಇಎಮ್‌ಐ(EMI) ಪಾವತಿಸಿದ್ದರು. ಆದರೆ, ಫೈನಾನ್ಸ್‌ನವರು ಸಾಲದ ಕಂತು ಪಾವತಿಯಾಗಿಲ್ಲವೆಂದು ನೆಪವೊಡ್ಡಿ 2026ರ ಜ.27ರಂದು ನಿಖಿಲ್ ಮನೆ ಬಳಿ ನಿಲ್ಲಿಸಿದ್ದ ವಾಹನ ಜಪ್ತಿ ಮಾಡಿದ್ದರು. ಇದನ್ನು ಪ್ರಶ್ನಿಸಿ ನಿಖಿಲ್ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗ(District Consumer Commission)ದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಫೈನಾನ್ಸ್‌ನಿಂದ ಸೇವಾನ್ಯೂನತೆ ಆಗಿರುವುದನ್ನು ಎತ್ತಿಹಿಡಿದಿದೆ. ವಾಹನ ವಶಕ್ಕೆ ಪಡೆಯದೇ ದೂರುದಾರರ ಹೆಸರಿಗೆ ದಾಖಲೆಗಳನ್ನು ವರ್ಗಾಯಿಸಿ ದೂರುದಾರರ ವಶಕ್ಕೆ ನೀಡಬೇಕು. ಹೆಸರು ವರ್ಗಾವಣೆಯಾದ ನಂತರ ಸಾಲದ ಇಎಂಐ ಅನ್ನು ಆರ್‌ಬಿಐ ಸುತ್ತೋಲೆ(RBI Circular) ಮತ್ತು ನಿಯಮಾವಳಿಗಳಂತೆ ಮರುನಿಗದಿಪಡಿಸಬೇಕು. ಮಾನಸಿಕ ಕಿರುಕುಳ ಮತ್ತು ಪರಿಹಾರವಾಗಿ 1 ಲಕ್ಷ ರೂ. ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ 10 ಸಾವಿರ ರೂ. ಅನ್ನು 45 ದಿನಗದೊಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ.10ರಷ್ಟು ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗ ಆದೇಶಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net