ಸಾಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಬಿ.ಆರ್.ಜಯಂತ್, ಸುಜಾತಾ, ಜೆ.ಎಚ್.ರಶ್ಮಿ ಇದ್ದರು.
Published on:
Copied
Follow Us
ಸಾಗರ: ಸಾಗರ ಮತ್ತು ತೀರ್ಥಹಳ್ಳಿ ಭಾಗದ ರೈತರಿಗೆ ವಿಮಾ ಕಂಪನಿಯಿಂದ ಮೋಸವಾಗಿದೆ. ಬೆಳೆವಿಮೆ ಕೊಡುತ್ತೇವೆ ಎಂದು ರೈತರಿಂದ ಕೋಟ್ಯಂತರ ರೂಪಾಯಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದರು.
ಸಾಗರ ಎಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ವಿಮಾ ಕಂಪನಿಗೆ ತಮ್ಮ ಪಾಲಿನ ಹಣ ಪಾವತಿ ಮಾಡಿವೆ. ಆದರೆ ಅತಿ ಹೆಚ್ಚು ಮಳೆ ಬಿದ್ದಿರುವ ಪ್ರದೇಶಗಳ ಅಂಕಿಅಂಶವನ್ನು ತಪ್ಪಾಗಿ ನಮೂದಿಸಿ ರೈತರಿಗೆ ವಂಚನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಬೆಳೆ ವಿಮೆ ಪರಿಹಾರ ಕೊಡುತ್ತೇವೆ ಎಂದು ಹಣ ಕಟ್ಟಿಸಿಕೊಂಡ ಕಂಪನಿ ನಡೆಯೇ ನಿಗೂಢವಾಗಿದೆ. ಸುಮಾರು 14 ಬಹುರಾಷ್ಟ್ರೀಯ ಕಂಪನಿಗಳು ಇಂತಹ ವಿಮಾ ವಹಿವಾಟು ನಡೆಸುತ್ತಿವೆ. ರೈತರಿಂದ ಸಾವಿರಾರು ಕೋಟಿ ರೂ. ಸಂಗ್ರಹಿಸಿ ಶೇ.2ರಷ್ಟು ಪರಿಹಾರವನ್ನೂ ರೈತರಿಗೆ ನೀಡುತ್ತಿಲ್ಲ. ಅಡಕೆಗೆ ಕೊಳೆರೋಗ, ಎಲೆಚುಕ್ಕೆ ರೋಗ ಭಾಧಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿಮೆ ಹಣವೂ ಬಾರದಿದ್ದರೆ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.
ತಾಲೂಕಿನ 36 ಮಳೆ ಮಾಪನಗಳ ಪೈಕಿ 12 ಮಾತ್ರ ಸುಸ್ಥಿತಿಯಲ್ಲಿವೆ. ಘಟಕಗಳ ಮೇಲೆ ಹೊದಿಕೆ ಹೊಚ್ಚಿದರೆ ಅದು ಮಳೆ ಮಾಪನ ಹೇಗೆ ಮಾಡುತ್ತದೆ. ಅಧಿಕಾರಿಗಳು ಕೂಡ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಮಂಗನ ಕಾಯಿಲೆಯಿಂದ ಈ ಹಿಂದೆ 22 ಜನರು ಮೃತಪಟ್ಟಿದ್ದನ್ನು ಮರೆಯಬೇಡಿ. ಕೆಎ್ಡಿ ಕುರಿತು ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಮಂಗ ಸತ್ತ ತಕ್ಷಣ ಅಧಿಕಾರಿಗಳು ದೌಡಾಯಿಸಬೇಕು. ಸೋಂಕಿತರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕೆಎ್ಡಿ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಬೇಕು. ಏನೇ ಸಮಸ್ಯೆಯಾದರೂ ಅಧಿಕಾರಿಗಳೇ ಹೊಣೆ ಹೊರಬೇಕು ಎಂದರು.
ಶಿವಮೊಗ್ಗ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಸುಜಾತಾ, ಸಾಗರ ತಹಸೀಲ್ದಾರ್ ಜೆ.ಎಚ್.ರಶ್ಮಿ, ತಾಪಂ ಇಒ ಶಿವಪ್ರಕಾಶ್, ಡಿಎಚ್‌ಒ ಡಾ. ನಟರಾಜ್, ಡಾ. ನಾಗರಾಜ್, ಟಿ.ಪಿ.ರಮೇಶ್, ಶ್ರೀನಿವಾಸ್, ಪಿಡಬ್ಲುೃಡಿ ಎಇಇ ಅನಿಲ್ ಇತರರಿದ್ದರು.
ಪರಿಹಾರ ಬಂದಿಲ್ಲ
ಈ ಹಿಂದೆ ಕೆಎ್ಡಿಯಿಂದ ಮೃತಪಟ್ಟವರು 27 ಜನ. ದಾಖಲೆಯಲ್ಲಿ ತೋರಿಸಿದ್ದು 21 ಜನ ಮಾತ್ರ. ಮೃತಪಟ್ಟವರಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಈವರೆಗೂ ಪರಿಹಾರ ಬಂದಿಲ್ಲ ಎಂದು ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್ ದೂರಿದರು. ಸಾಗರ ತಾಲೂಕಿನ ವಿವಿಧ ಗ್ರಾಪಂಗಳ ಅನೇಕ ಮಳಿಗೆಗಳ ಬಾಡಿಗೆದಾರರಿಂದ ಬಾಡಿಗೆ ವಸೂಲಿ ಬಾಕಿ ಇದೆ. ಕೆಲವರು ಕೋರ್ಟಿಗೆ ಹೋಗಿದ್ದಾರೆ. ಈ ಬಗ್ಗೆ ತಾಪಂ ಗಮನಹರಿಸಬೇಕು. ಅದರಲ್ಲಿಯೂ ಆನಂದಪುರ ಮತ್ತು ತುಮರಿ ಭಾಗದಲ್ಲಿ ಹೆಚ್ಚು ಆರ್ಥಿಕ ವಹಿವಾಟು ನಡೆಸುವ ಮಳಿಗೆಗಳಿವೆ. ಪಂಚಾಯಿತಿ ಆದಾಯ ದೃಷ್ಟಿಯಿಂದ ಗಮನಹರಿಸಬೇಕು ಎಂದು ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ಒತ್ತಾಯಿಸಿದರು.