ಬಿಡದಿ ಟೌನ್‌ಶಿಪ್‌ಗೆ ರೈತ ಮುಖಂಡರ ವಿರೋಧ I bidadi township

 ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಕೆ.ಟಿ.ಗಂಗಾಧರ್, ಮಂಜುನಾಥೇಶ್ವರ್, ಈರಣ್ಣ ಪ್ಯಾಟಿ, ಯಶವಂತ್ ರಾವ್ ಘೋರ್ಪಡೆ, ಹಿರಣ್ಣಯ್ಯ, ಮೋಹನ್‌ಕುಮಾರ್, ಜಗದೀಶ್ ನಾಯ್ಕ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಕೆ.ಟಿ.ಗಂಗಾಧರ್, ಮಂಜುನಾಥೇಶ್ವರ್, ಈರಣ್ಣ ಪ್ಯಾಟಿ, ಯಶವಂತ್ ರಾವ್ ಘೋರ್ಪಡೆ, ಹಿರಣ್ಣಯ್ಯ, ಮೋಹನ್‌ಕುಮಾರ್, ಜಗದೀಶ್ ನಾಯ್ಕ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಕಚೇರಿ ಎದುರು ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ
  • ರಾಜ್ಯ ಸರ್ಕಾರದ ರೈತ ವಿರೋಧ ನೀತಿಗೆ ಆಕ್ರೋಶ
  • ಕೃಷಿ ಜಮೀನು ಕಬಳಿಕೆಗೆ ಆಕ್ಷೇಪ
ಶಿವಮೊಗ್ಗ: ಬಿಡದಿ (bidadi) ಟೌನ್‌ಶಿಪ್ ಯೋಜನೆ (plan) ಕೈ ಬಿಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಮೂಲ ಸೌಕರ್ಯಗಳಾದ ರಸ್ತೆ, ನೀರಾವರಿ, ಕೈಗಾರಿಕೆಗಳಿಗೆ ರೈತರ ಭೂಮಿ ವಶಪಡಿಸಿಕೊಳ್ಳಲು ನಮ್ಮ ವಿರೋಧಗಳಿಲ್ಲ. ಆದರೆ ಅವೈಜ್ಞಾನಿಕ ಯೋಜನೆಗಳಿಗೆ ಮತ್ತು ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ಸಹಿಸಲ್ಲ ಎಂದರು.
10 ವರ್ಷಗಳಿಂದ ರೈತರ ಭೂಮಿ ವಶಪಡಿಸಿಕೊಂಡು ಅದರಲ್ಲಿ ಎಷ್ಟು ಅಭಿವೃದ್ಧಿ ಸಾಧಿಸಿದ್ದೇವೆ ಎಂಬುದನ್ನು ಸರ್ಕಾರ ತಿಳಿಸಬೇಕು. ಟೌನ್‌ಶಿಪ್‌ಗಾಗಿ ವಶಪಡಿಸಿಕೊಂಡ ಭೂಮಿಗಳಲ್ಲಿ ಶೇ.10ರಷ್ಟು ಮಾತ್ರ ಅಭಿವೃದ್ಧಿಯಾಗಿದ್ದು, ಶೇ.90ರಷ್ಟು ಹಾಗೆಯೇ ಉಳಿದಿದೆ ಎಂದು ಆರೋಪಿಸಿದರು.
ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡರೆ ಅವರ ಬದುಕು ಬೀದಿಗೆ ಬರುತ್ತದೆ. ಕೃಷಿ ಬಿಟ್ಟರೆ ಬೇರೆ ಉದ್ಯೋಗ ಅವರಿಗೆ ತಿಳಿದಿರುವುದಿಲ್ಲ. ಈಗ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಪ್ರಾಜೆಕ್ಟ್‌ಗಾಗಿ ಸುಮಾರು 7,481 ಎಕರೆ ಜಮೀನನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಈಗ ರೈತರು ಆತಂಕದಲ್ಲಿದ್ದಾರೆ. ಇರುವ ಜಮೀನನ್ನು ಬಿಟ್ಟು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಗೋಳಾಡುತ್ತಿದ್ದಾರೆ. ಶೇ.80ರಷ್ಟು ರೈತರು ಯೋಜನೆಯ ಪರವಾಗಿದ್ದಾರೆ ಎಂದು ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ. ಕೂಡಲೇ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಮಳೆ ಕೈಕೊಟ್ಟಿರುವುದರಿಂದ ಬರಪೀಡಿತ ಜಿಲ್ಲೆಗಳನ್ನು ಪಟ್ಟಿ ಮಾಡಿ ಘೋಷಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳಿಂದ ರೈತರಿಗೆ ನೋಟಿಸ್ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರೈತ ಚಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ ಕೆ.ಟಿ.ಗಂಗಾಧರ್, ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ, ಪ್ರಮುಖರಾದ ಯಶವಂತ ರಾವ್ ಘೋರ್ಪಡೆ, ಪುಟ್ಟಪ್ಪ , ಹಿರಣ್ಣಯ್ಯ ಭದ್ರಾವತಿ, ಜಗದೀಶ್ ನಾಯ್ಕ, ಮೋಹನ್‌ಕುಮಾರ್ ಪ್ರತಿಭಟನೆಯಲ್ಲಿದ್ದರು.
ರೈತ ಹೋರಾಟದ ಹುತ್ಮಾರ ದಿನ
ರೈತ ಹೋರಾಟದಲ್ಲಿ ಪಾಲ್ಗೊಂಡು ಹುತ್ಮಾರಾದ ಎಲ್ಲರನ್ನೂ ಈ ದಿನ ಸ್ಮರಿಸಲಾಗುತ್ತಿದೆ. ಸರ್ಕಾರದ ದಬ್ಬಾಳಿಕೆ ವಿರುದ್ಧ ನಡೆಸಿದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ನೆನೆಪಿಸುವ ದಿನವಿದು. ಇಂದಿಗೂ ರೈತರ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಬೆಲೆ ತಾರತಮ್ಯ ಇನ್ನೂ ಇದೆ. ಇದರ ಜತೆಗೆ ಸರ್ಕಾರಗಳು ಬಂಡವಾಳಶಾಹಿಗಳ ಜತೆ ಸೇರಿಕೊಂಡು ರೈತರ ಫಲವತ್ತಾದ ಜಮೀನುಗಳನ್ನು ಬಲವಂತದಿಂದಲೂ, ಆಮಿಷದಿಂದಲೂ ಕಸಿದುಕೊಳ್ಳುತ್ತಿರುವುದು ಅಪಾಯದ ಸಂಕೇತ ಎಂದು ಕೆ.ಟಿ.ಗಂಗಾಧರ್ ಕಳವಳ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net