ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ | Fake bomb threat

ಜಿಲ್ಲಾ ನ್ಯಾಯಾಲಯದ ಪಾರ್ಕಿಂಗ್ ಸ್ಥಳದಲ್ಲಿ ಶ್ವಾನದಳ ಮೂಲಕ ತಪಾಸಣೆ ನಡೆಸಲಾಯಿತು.
ಜಿಲ್ಲಾ ನ್ಯಾಯಾಲಯದ ಪಾರ್ಕಿಂಗ್ ಸ್ಥಳದಲ್ಲಿ ಶ್ವಾನದಳ ಮೂಲಕ ತಪಾಸಣೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಜ್ಮಲ್ ಕಸಬ್ ಹೆಸರಿನಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ
  • ಇ-ಮೇಲ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಬಿಗಿ ಭದ್ರತೆ
  • ಜಿಲ್ಲಾ ನ್ಯಾಯಾಧೀಶರಿಗೆ ಇ-ಮೇಲ್ ಸಂದೇಶ
ಶಿವಮೊಗ್ಗ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅಜ್ಮಲ್ ಕಸಬ್(Ajmal Kasab) ಹೆಸರಿನಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ತಪಾಸಣೆ ಬಳಿಕ ಇದೊಂದು ಹುಸಿ ಬೆದರಿಕೆ(Fake threat)ಯ ಇ-ಮೇಲ್ ಎಂಬುದು ಸ್ಪಷ್ಟವಾಯಿತು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮಂಜುನಾಥ್ ಅವರ ಇ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ತುಕ್ಕು ಹಿಡಿದ ಮೊಳೆಗಳನ್ನು ಜೋಡಿಸಲಾದ 5 ಮಿನಿ ಸಿಲಿಂಡರ್ ಬಾಂಬ್‌(Mini cylinder bomb)ಗಳನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಇ-ಮೇಲ್‌ನಲ್ಲಿತ್ತು. ಕೆಲ ಸಾಮಾಜಿಕ ಜಾಲತಾಣಗಳ ಲಿಂಕ್ ಕೂಡ ನೀಡಲಾಗಿತ್ತು.
ಬಾಂಬ್ ಬೆದರಿಕೆ ಹಿನ್ನೆಲೆ ಪೊಲೀಸರು, ಶ್ವಾನ ದಳ, ಬಾಂಬ್ ಪತ್ತೆ ದಳ(Dog-Bomb Detection Squad)ದ ಅಧಿಕಾರಿಗಳು ನ್ಯಾಯಾಲಯಕ್ಕೆ ದೌಡಾಯಿಸಿ ಪರಿಶೀಲಿಸಿದರು. ನ್ಯಾಯಾಲಯ ಸಂಕೀರ್ಣ, ಕೋರ್ಟ್ ಹಾಲ್, ನ್ಯಾಯಾಲಯ ಕೊಠಡಿಗಳು, ರೆಕಾರ್ಡ್ ರೂಂ, ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳ ತಪಾಸಣೆ ನಡೆಯಿತು.
ನ್ಯಾಯಾಲಯ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಕಟ್ಟಡದ ಎರಡು ಗೇಟ್‌ಗಳ ಹೊರತು ಉಳಿದೆಲ್ಲ ಗೇಟ್ ಬಂದ್ ಮಾಡಲಾಗಿತ್ತು. ಎರಡೂ ಗೇಟ್‌ಗಳಲ್ಲಿ ಮೆಟಲ್ ಡಿಟೆಕ್ಟರ್(Metal detector) ಇರಿಸಿ ನಾಗರಿಕರ ತಪಾಸಣೆ ನಡೆಸಲಾಯಿತು. ಕೋರ್ಟ್ ಆವರಣದೊಳಗೆ ಪ್ರವೇಶಿಸುವ ವಾಹನಗಳ ಹಾಗೂ ಕೋರ್ಟ್‌ಗೆ ಬರುವವರ ಬ್ಯಾಗ್‌ಗಳ ತಪಾಸಣೆ ನಡೆಸಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಎಸ್‌ಪಿ ಬಿ.ನಿಖಿಲ್ ಕೋರ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಕೋರ್ಟ್ ಆವರಣದ ವಿವಿಧೆಡೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ(Principal District and Sessions Judge) ಮಂಜುನಾಥ್ ಅವರನ್ನು ಭೇಟಿಯಾಗಿ ಮಾಹಿತಿ ಪಡೆದರು. ನ್ಯಾಯಾಲಯದ ಕಾರ್ಯಚಟುವಟಿಕೆಗಳು ಎಂದಿನಂತೆ ನಡೆದಿದ್ದು, ಭದ್ರತಾ ಪರಿಶೀಲನೆ ಬಳಿಕ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
"

ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಗ್ಗೆ ಎಸ್‌ಪಿಗೆ ದೂರು ನೀಡಲಾಗಿದೆ. ಸೈಬರ್ ಕ್ರೈಂ ಅಧಿಕಾರಿಗಳು ಇ-ಮೇಲ್ ಮೂಲ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಥಮಿಕವಾಗಿ ಇದು ಹುಸಿ ಬೆದರಿಕೆ ಎನ್ನುವ ಅನುಮಾನವಿದೆ. ಆದರೂ ಸಿಬ್ಬಂದಿ, ವಕೀಲರು ಮತ್ತು ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಯಿತು.

— ಜಿ.ಎ.ಮಂಜುನಾಥ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net