ಸಾಂಸ್ಕೃತಿಕ ಜಗತ್ತಿನ ವಿಸ್ತರಣೆಗೆ ಎಲ್ಲರ ಚಿಂತನೆ ಅವಶ್ಯ I cultural world

ಶಿವಮೊಗ್ಗ ಬಾಪೂಜಿನಗರ ಸರ್ಕಾರಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಕನ್ನಡ ನುಡಿ ಉತ್ಸವ-2026ರ ಉದ್ಘಾಟನೆಯಲ್ಲಿ ಎಸ್.ಎನ್.ಚನ್ನಬಸಪ್ಪ, ಪ್ರೊ. ಎಸ್.ಶಶಿಧರ್, ಡಾ. ಮೋಹನ್ ಚಂದ್ರಗುತ್ತಿ, ಡಾ. ವಿದ್ಯಾ ಮರಿಯಾ ಜೋಸೆಫ್ ಇತರರಿದ್ದರು.
ಶಿವಮೊಗ್ಗ ಬಾಪೂಜಿನಗರ ಸರ್ಕಾರಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಕನ್ನಡ ನುಡಿ ಉತ್ಸವ-2026ರ ಉದ್ಘಾಟನೆಯಲ್ಲಿ ಎಸ್.ಎನ್.ಚನ್ನಬಸಪ್ಪ, ಪ್ರೊ. ಎಸ್.ಶಶಿಧರ್, ಡಾ. ಮೋಹನ್ ಚಂದ್ರಗುತ್ತಿ, ಡಾ. ವಿದ್ಯಾ ಮರಿಯಾ ಜೋಸೆಫ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಗೀಳು ಮಕ್ಕಳ ಸೃಜನಶೀಲತೆ ನಾಶಕ್ಕೆ ದಾರಿ
  • ತುಮಕೂರು ವಿವಿ ಕುಲಸಚಿವ ಡಾ. ಮೋಹನ್ ಚಂದ್ರಗುತ್ತಿ ಅಭಿಮತ
  • ಕನ್ನಡ ನುಡಿ ಉತ್ಸವಕ್ಕೆ ಚಾಲನೆ
ಶಿವಮೊಗ್ಗ: ದಯೆಯನ್ನು ಸೃಷ್ಟಿಸುವ, ಸಾಂಸ್ಕೃತಿಕ (cultural) ಜಗತ್ತು (world) ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ ಎಂದು ತುಮಕೂರು (tumkur) ವಿವಿ ಪರೀಕ್ಷಾಂಗ ಕುಲಸಚಿವ ಡಾ. ಮೋಹನ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
ಬಾಪೂಜಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸಂಜೆ ಕಾಲೇಜು ಸೋಮವಾರ ಆಯೋಜಿಸಿದ್ದ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಕನ್ನಡ ನುಡಿ ಉತ್ಸವ-2026 ಉದ್ಘಾಟಿಸಿ ಮಾತನಾಡಿದರು.
ಧರ್ಮ, ಜಾತಿ, ಭಾಷೆ ಹೆಸರಿನಲ್ಲಿ ಅಸಹನೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಇಂದಿನ ಮಕ್ಕಳಿದ್ದಾರೆ. ಇವರನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನಡೆಸಬೇಕಿದೆ. ಮನಸ್ಸುಗಳನ್ನು ಕಟ್ಟುವ ಕಾಯಕದಿಂದ ಇದು ಸಾಧ್ಯವಾಲಿದೆ. ಸಂಸ್ಕೃತಿ ಎಂಬುದು ಒಂದು ಜೀವನಕ್ರಮವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಮೊಬೈಲ್ ಕಸಿದುಕೊಂಡಿದೆ. ಮಕ್ಕಳ ಮನಸ್ಸಿನಲ್ಲಿ ದ್ವೇಷ ಮತ್ತು ಅಸಹನೆ ತುಂಬುತ್ತಿದೆ. ಬಹುಬೇಗ ಉದ್ವಿಗ್ನಗೊಳ್ಳುವ ಮನಸ್ಥಿತಿ ಇಂದಿನ ಮಕ್ಕಳದ್ದು. ಸಾಂಸ್ಕೃತಿಕವಾಗಿ ಮನಸ್ಸನ್ನು ಜಾಗೃತಗೊಳಿಸುವುದೇ ಇದಕ್ಕೆ ಪರಿಹಾರ. ಹಾಡುವ ಮತ್ತು ಕೇಳುವ ಲವಲವಿಕೆ ಪ್ರವೃತ್ತಿ ಮಕ್ಕಳಲ್ಲಿ ಮೂಡಬೇಕು ಎಂದರು.
ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಮ್ಮ ಜೀವನ ಕ್ರಮದಲ್ಲಿಯೇ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿದೆ. ನಮ್ಮ ಸಂಸ್ಕೃತಿ ಮೇಲೆ ಅನೇಕ ದಾಳಿಗಳಾಗಿವೆ. ಆದರೆ ಸಂಸ್ಕೃತಿ ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ದಾಳಿ ನಂತರ ಅದು ಮತ್ತಷ್ಟು ಗಟ್ಟಿಯಾಗಿದೆ. ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದ ಪರಂಪರೆ ನಮ್ಮದು ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ ಮಾತನಾಡಿ, ನಾವು ಚಿಕ್ಕವರಿದ್ದ ಸಂದರ್ಭದಲ್ಲಿ ನಮ್ಮ ಪರಿಸರದಲ್ಲಿಯೇ ಜಾನಪದ, ಸಾಂಸ್ಕೃತಿಕ ಜಗತ್ತು ಇತ್ತು. ಪ್ರತಿ ಮನೆಯಲ್ಲೂ ಇಂತಹ ಪರಂಪರೆ ಇದ್ದ ಕಾರಣ ನಾವು ಅದರೊಂದಿಗೆ ಬೆಳೆದೆವು. ಆದರೆ ಇಂದು ಮಕ್ಕಳಿಗೆ ಅಂತಹ ವಾತಾವರಣ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಚಾರ್ಯ ಪ್ರೊ. ಎಸ್.ಶಶಿಧರ್, ಐಕ್ಯುಎಸಿ ಸಂಚಾಲಕಿ ಡಾ. ವಿದ್ಯಾ ಮರಿಯಾ ಜೋಸೆಫ್, ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮೋಹನ್ ಇತರರಿದ್ದರು. 20 ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
"

ಆಧುನಿಕ ಸೌಲಭ್ಯ ಮತ್ತು ಮೊಬೈಲ್ ಜಗತ್ತು ಮಕ್ಕಳಲ್ಲಿ ಹಿಂಸಾಪ್ರವೃತ್ತಿಯನ್ನು ಹೆಚ್ಚಿಸುತ್ತಿದೆ. ಈ ರಾಕ್ಷಸಿ ಪ್ರವೃತ್ತಿ ಬೆಳೆಸುವ ಮತ್ತು ಹಿಂಸೆಯನ್ನು ಸಂಭ್ರಮಿಸುವ ಮನೋವೃತ್ತಿ ಬದಲಾಗಬೇಕಿದೆ. ಈ ನೆಲೆಯಲ್ಲಿ ಕಾಲೇಜು ಅಧ್ಯಾಪಕರು ಹೆಚ್ಚು ಚಿಂತನೆ ಮಾಡಬೇಕಿದೆ. ಮನೆಗಳಲ್ಲಿನ ವಾತಾವರಣವೂ ಸಕಾರಾತ್ಮಕ ಆಗಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net