ಈಸೂರು ಗ್ರಾಮದಲ್ಲಿ ಸೌಹಾರ್ದ ಸಂವಾದ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ ಸಂಕ್ಲಾಪುರ, ಈಸೂರು ಹುಚ್ಚಪ್ಪ, ಸುರೇಶ್ ನಾಯ್ಕ ಇತರರಿದ್ದರು.
ಶಿಕಾರಿಪುರ: ಉಪೇತ ಸಮುದಾಯಗಳ ಸಬಲೀಕರಣವೇ ನಮ್ಮ ಪದ ಸಂಕಲ್ಪ. ಸಮಾಜದ ಅಭ್ಯುದಯಕ್ಕೆ ಸಮಾನತೆಯೇ ಸರ್ವಶ್ರೇಷ್ಠವಾದ ಮಂತ್ರ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಈಸೂರು ಗ್ರಾಮದಲ್ಲಿ ಸೋಮವಾರ ಸೌಹಾರ್ದ ಸಂವಾದ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈಸೂರು ದೇಶಭಕ್ತಿಯ ಸಾರೂಪ. ಈ ಮಣ್ಣಿನ ಕಣ ಕಣದಲ್ಲಿಯೂ ಸ್ವಾಭಿಮಾನ, ದೇಶಭಕ್ತಿ ತುಂಬಿದೆ. ಇಂತಹ ಶ್ರೇಷ್ಠತೆಯ ನೆಲದಲ್ಲಿ ನಿಮ್ಮೊಂದಿಗೆ ಸಂವಾದ ನಡೆಸುವ ಮತ್ತು ಗ್ರಾಮ ವಾಸ್ತವ್ಯ ಮಾಡುವ ಭಾಗ್ಯ ನನಗೆ ಲಭಿಸಿದೆ ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳು ಸಾಕಷ್ಟು ತಳ ಸಮುದಾಯದವರ ಮನೆ ಬಾಗಿಲು ಸೇರುತ್ತಲೇ ಇಲ್ಲ. ಸೌಲಭ್ಯಗಳ ಸದ್ಬಳಕೆಯಾಗಬೇಕು. ಸಮುದಾಯದ ಕೊನೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು. ಸಾಮಾಜಿಕವಾಗಿ ತಳ ಸಮುದಾಯದವರು ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಹಿತ ಕಾಯುವುದೇ ನಮ್ಮ ಗುರಿ. ದಲಿತ ಸಮುದಾಯಗಳ ಅಭಿವೃದ್ಧಿ, ಆಶ್ವಾಸನೆಗೆ ಸೀಮಿತವಾಗದೆ, ಅದು ಕೃತಿಯಲ್ಲಿ ಮೂಡಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಉಪೇತ ಸಮುದಾಯವನ್ನು ಕೇವಲ ಅಧಿಕಾರಕ್ಕಾಗಿ ಒಲೈಸಲಾಗುತ್ತಿದೆ ಎಂದರು.
ಬಿಜೆಪಿ ಮಂಡಲ ಅಧ್ಯ ಹನುಮಂತಪ್ಪ ಸಂಕ್ಲಾಪುರ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಎಸ್ಟಿ ಸಮಾಜದ ಮುಖಂಡರಾದ ಹುಚ್ಚಪ್ಪ, ದೇವಾಂಗ ಸಮಾಜದ ಮುಖಂಡರಾದ ಈಸೂರು ಹುಚ್ಚಪ್ಪ, ಸುರೇಶ್ ನಾಯ್ಕ, ಅಂಜನಾಪುರ ಶಿವಪ್ಪಯ್ಯ, ಶಿವಣ್ಣ, ಕೋರ್ಲಳ್ಳಿ ನಾಗಣ್ಣ, ಕಲ್ಮನೆ ಲೋಕೇಶ್, ಅಶೋಕ್ ಮತ್ತಿತರರಿದ್ದರು.
ಈಸೂರು ನಮ್ಮ ಹೆಮ್ಮೆ ಮತ್ತು ಹಿರಿಮೆ. ಏಸೂರು ಕೊಟ್ಟರೂ ಈಸೂರು ಕೊಡೆವು ಎಂದು ಸ್ವಾತಂತ್ರ್ಯದ ಕಿಚ್ಚುಹಚ್ಚಿದ ದೇಶಭಕ್ತರ ನೆಲವಿದು. ಇಲ್ಲಿನ ಹುತಾತ್ಮರ ಸ್ಮಾರಕವನ್ನು ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ. ಇದು ಕೂಡ ಒಂದು ಪ್ರವಾಸಿ ತಾಣವಾಗಿದೆ.