ಅಪಾಯಕಾರಿ ಸ್ಥಳಕ್ಕೆ ಪ್ರವೇಶ ನಿಷಿದ್ಧ I entry probhited

ಕೆಲವರು ಅಪಾಯಕಾರಿ ಸ್ಥಳದಲ್ಲಿ ಜೋಗ ಜಲಪಾತಕ್ಕೆ ತೆರಳುತ್ತಿದ್ದ ಮಾರ್ಗದಲ್ಲಿ ಈಗ ಪ್ರವೇಶ ನಿರ್ಬಂಧಿಸಲಾಗಿದೆ.
ಕೆಲವರು ಅಪಾಯಕಾರಿ ಸ್ಥಳದಲ್ಲಿ ಜೋಗ ಜಲಪಾತಕ್ಕೆ ತೆರಳುತ್ತಿದ್ದ ಮಾರ್ಗದಲ್ಲಿ ಈಗ ಪ್ರವೇಶ ನಿರ್ಬಂಧಿಸಲಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ಜಿಲ್ಲಾಡಳಿತದಿಂದ ಕಠಿಣ ನಿಯಮ
  • ವಿವಿಧ ಇಲಾಖೆಗಳ ಸಮನ್ವಯ ಅವಶ್ಯ
  • ಪ್ರವಾಸಿಗರ ಹಿತದೃಷ್ಟಿಯಿಂದ ಈ ಕ್ರಮ
ಶಿವಮೊಗ್ಗ: ಜಿಲ್ಲೆಯ ಪ್ರವಾಸಿ (tourist) ತಾಣಗಳಿಗೆ ತೆರಳುವ ಪ್ರವಾಸಿಗರ ರಕ್ಷಣೆ ಬಗ್ಗೆ ಮಳೆಗಾಲ (rainy) ದ ಅವಧಿಯಲ್ಲಿ ಜಿಲ್ಲಾಡಳಿತ ವಿಶೇಷ ಗಮನಹರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸೆಲ್ಫಿ ಹುಚ್ಚಿನಿಂದ ಅಪಾಯಕ್ಕೆ ಸಿಲುಕುವ ಪ್ರವಾಸಿಗರಿಗೆ ಕಡಿವಾಣ ಹಾಕುವ ಸಂಬಂಧ ಅಪಾಯಕಾರಿ ಪ್ರದೇಶಕ್ಕೆ ಪ್ರವಾಸಿಗರಿಗೆ ಪ್ರವೇಶ (entry) ನಿರಾಕರಿಸಲು ನಿರ್ಧರಿಸಲಾಗಿದೆ.
ಕಾಡಿನಾಳದಲ್ಲಿರುವ ಕೆಲವು ಜಲಪಾತಗಳಿಗೆ ತೆರಳುವ ಪ್ರವಾಸಿಗರು ಹುಚ್ಚಾಟ ನಡೆಸಿ ಪ್ರಾಣ ಕಳೆದುಕೊಂಡ ನಿದರ್ಶನಗಳೂ ಇವೆ. ಅದರಲ್ಲೂ ಸೆಲ್ಫಿ ಕ್ರೇಜ್ ಕೆಲವರ ಪ್ರಾಣಕ್ಕೆ ಅಪಾಯ ತಂದೊಡ್ಡಿದ ನಿದರ್ಶನಗಳಿವೆ. ಇತ್ತೀಚೆಗೆ ಕೆಲವು ಯುವಕರು ಜೋಗ ಜಲಪಾತದ ಅಪಾಯಕಾರಿ ಸ್ಥಳದಲ್ಲಿ ನಿಂತು ರೀಲ್ಸ್ ಮಾಡಿ, ಪೊಲೀಸರ ಅತಿಥಿಯಾಗಿದ್ದರು. ಇದೆಲ್ಲವನ್ನೂ ಗಮನಿಸಿದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಮುಂದಾಗಿದೆ.
ಘಾಟ್ ಪ್ರದೇಶದಲ್ಲಿ ಜಲಪಾತದಂತೆ ಧುಮ್ಮಿಕ್ಕುವ ನೀರಿನಲ್ಲಿ ಪ್ರಯಾಣಿಕರು ಆಟವಾಡುವುದು, ಫೋಟೋ ಶೂಟ್ ನಡೆಸಿ ಉಳಿದ ವಾಹನಗಳ ಚಾಲನೆಗೆ ತೊಂದರೆ ಉಂಟು ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇನ್ಮುಂದೆ ಕೆಲವು ಕಠಿಣ ನಿಯಮಗಳನ್ನು ಕಾರ್ಯಗತಗೊಳಿಸಲಿದೆ.
ಪ್ರಯಾಣದ ಮಾರ್ಗದಲ್ಲಿ ಹಳ್ಳ, ನದಿ, ತೊರೆಗಳಿಗೆ ಇಳಿದು ಮೋಜು ಮಾಡುವುದು ಕೆಲವೊಮ್ಮೆ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ. ಜಾಗದ ಪರಿಚಯವಿಲ್ಲದ ಸ್ಥಳದಲ್ಲಿ ನಡೆಸುವ ಕೆಲ ಚಟುವಟಿಕೆಗಳಿಂದ ಜನರು ತೊಂದರೆಗೆ ಸಿಲುಕಬೇಕಾಗುತ್ತದೆ. ಅಪಾಯ ಉಂಟಾದರೆ ಅಂತಹ ಸ್ಥಳದಲ್ಲಿ ಸಹಾಯಕ್ಕೆ ಯಾರೂ ಇರುವುದಿಲ್ಲ. ಅನೇಕ ಕಡೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡಾ ಸಿಗುವುದಿಲ್ಲ. ಹೀಗಾಗಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಈ ಎಲ್ಲ ಕಾರಣಗಳಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ದೃಢವಾದ ಹೆಜ್ಜೆ ಇರಿಸಿದೆ. ಇದಕ್ಕೆ ಅನೇಕ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವೂ ಇದೆ. ಜಿಲ್ಲಾಡಳಿತಗಳ ನಿರ್ದೇಶನ ಎಷ್ಟರಮಟ್ಟಿಗೆ ಅನುಷ್ಠಾನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲ ಇಲಾಖೆಗಳ ಹೊಣೆ
ಜಿಲ್ಲೆಯ ನದಿಗಳು, ಜಲಪಾತಗಳು, ಅಣೆಕಟ್ಟುಗಳು, ಹಿನ್ನೀರು, ಗುಡ್ಡಗಾಡು ಅರಣ್ಯ ಪ್ರದೇಶಗಳು ಹಾಗೂ ಚಾರಣ ಸ್ಥಳಗಳಿಗೆ ರಾಜ್ಯದ ವಿವಿಧ ಭಾಗವಲ್ಲದೆ ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಜಲಪಾತಗಳಲ್ಲಿ ದುಮ್ಮಿಕ್ಕುವ ನೀರಿನ ಪ್ರಮಾಣವೂ ಹೆಚ್ಚಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾರಿ ಗಾಳಿಗೆ ಮರ ಬೀಳುವ ಅಪಾಯವಿದೆ. ಗುಡ್ಡ ಕುಸಿತದ ಭೀತಿಯೂ ಇದೆ. ಹೀಗಾಗಿ ಪ್ರವಾಸಿಗರ ಜೀವ ರಕ್ಷಣೆ ಎಲ್ಲ ಇಲಾಖೆಗಳ ಹೊಣೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೋಂ ಸ್ಟೇಗಳ ಮೇಲೂ ಕಣ್ಣು
ಜಿಲ್ಲೆಯ ವಿವಿಧೆಡೆ ಇರುವ ಹೋಂ ಸ್ಟೇ, ರೆಸಾರ್ಟ್‌ಗಳಿಗೂ ಜಿಲ್ಲಾಡಳಿತ ಪ್ರವಾಸಿಗರ ಹಿತದೃಷ್ಟಿಯಿಂದ ಕೆಲ ಸೂಚನೆಗಳನ್ನು ರವಾನಿಸಿದೆ. ಟ್ರಾವೆಲ್ ಏಜೆನ್ಸಿಗಳು ಪ್ರವಾಸಿಗರಿಗೆ ಮಳೆಗಾಲದ ಸುರಕ್ಷಾ ನಿಯಮಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದು ಕಟ್ಟಪ್ಪಣೆ ಮಾಡಿದೆ. ರಾತ್ರಿ ವೇಳೆ ಅಪಾಯಕಾರಿ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಪೊಲೀಸ್, ಅಗ್ನಿಶಾಮಕ ದಳ, ಆಂಬುಲೆನ್ಸ್ ಸೇರಿ ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ದೂರವಾಣಿ ಸಂಖ್ಯೆಗಳನ್ನು ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸಲು ಜಿಲ್ಲಾಡಳಿತ ಸೂಚಿಸಿದೆ.

ಬ್ಯಾರಿಕೇಡ್ ಅಳವಡಿಕೆ

ಜಲಪಾತಗಳ ಅಂಚು, ಆಳವಾದ ನೀರಿನ ಪ್ರದೇಶಗಳು ಮತ್ತು ಜಾರಿ ಬೀಳುವ ಸಾಧ್ಯತೆಯಿರುವ ವೀಕ್ಷಣಾ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಗೂ ಸುರಕ್ಷತಾ ಬೇಲಿಗಳನ್ನು ನಿರ್ಮಿಸಬೇಕು. ಪ್ರವಾಸಿಗರು ನಿಷೇಧಿತ ಸ್ಥಳಗಳಿಗೆ ಪ್ರವೇಶಿಸುವುದು, ಈಜುವುದು, ಜೀವಕ್ಕೆ ಎರವಾಗುವ ರೀತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ರೀಲ್ಸ್ ಮಾಡುವುದನ್ನು ನಿರ್ಬಂಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಮದ್ಯ ಸೇವನೆಯನ್ನು ಕಟ್ಟುನಿಟ್ಟಾಗಿ ತಡೆಯಲು ನಿರ್ಧರಿಸಲಾಗಿದೆ.

ಭದ್ರತೆಗೆ ಹೆಚ್ಚಿನ ಒತ್ತು

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸರ್ಕಾರಿ ರಜೆ ದಿನಗಳು, ವಾರಾಂತ್ಯದಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪೊಲೀಸ್, ಗೃಹರಕ್ಷಕ ದಳ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಹವಾಮಾನ ಇಲಾಖೆಯು ಆರೆಂಜ್ ಅಥವಾ ರೆಡ್ ಅಲರ್ಟ್ ಘೋಷಿಸಿದ ಸಂದರ್ಭದಲ್ಲಿ ಜಲಪಾತಗಳು ಮತ್ತು ಚಾರಣಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅನಧಿಕೃತವಾಗಿ ಟ್ರೆಕ್ಕಿಂಗ್ ಹಾಗೂ ಕ್ಯಾಂಪಿಂಗ್ ಮಾಡುವಂತಿಲ್ಲ. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಿಂದ ರಕ್ಷಣಾ ಸಲಕರಣೆಗಳೊಂದಿಗೆ ತುರ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗುವುದು. ಜಲಾವೃತ ಪ್ರದೇಶಗಳಲ್ಲಿ ಲೈಫ್ ಜಾಕೆಟ್ ಹಾಗೂ ತರಬೇತಿ ಪಡೆದ ಸಿಬ್ಬಂದಿ ಕಡ್ಡಾಯವಾಗಿ ಇರಲಿದ್ದಾರೆ.
"

ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಅಪಾಯ ಪ್ರದೇಶ, ನೀರಿನಲ್ಲಿ ಇಳಿಯಬೇಡಿ, ಸೆಲ್ಫಿ ತೆಗೆಯುವುದು ಅಪಾಯಕಾರಿ ಹಾಗೂ ಪ್ರವೇಶ ನಿರ್ಬಂಧ ಎಂಬ ಎಚ್ಚರಿಕೆಯ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಈ ವಿಷಯದಲ್ಲಿ ಸಮನ್ವಯದಿಂದ ಕೆಲಸ ಮಾಡಬೇಕು. ರಸ್ತೆಗಳಲ್ಲಿನ ಗುಂಡಿ ಬಿದ್ದಿರುವ ಜಾಗ ಮತ್ತು ಭೂಕುಸಿತದ ಅಪಾಯವಿರುವ ಸ್ಥಳಗಳನ್ನು ಸ್ಥಳೀಯ ಸಂಸ್ಥೆಯಿಂದ ತಕ್ಷಣ ಸರಿಪಡಿಸಬೇಕು.

— ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net