ಕಳ್ಳತನವಾಗಿದ್ದ ಬೈಕ್ ಖರೀದಿಸಿದ ಇಂಜಿನಿಯರ್ ಪೇಚಿಗೆ | Buy second hand bike

ಶಿವಮೊಗ್ಗ ತುಂಗಾನಗರ ಠಾಣೆ
ಶಿವಮೊಗ್ಗ ತುಂಗಾನಗರ ಠಾಣೆ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಯಮಹಾ ಆರ್‌ಎಕ್ಸ್ ಬೈಕ್
  • ಗದಗದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ ಶಿವಮೊಗ್ಗದ ಯುವಕ
  • ಸಂಚಾರ ಪೊಲೀಸರು ಬೈಕ್ ತಡೆದು ತಪಾಸಣೆ ಮಾಡಿದಾಗ ಶಾಕ್
ಶಿವಮೊಗ್ಗ: ಸೌದಿ ಅರೇಬಿಯಾ(Saudi Arabia)ದಲ್ಲಿ ಇಂಜಿನಿಯರ್ ಆಗಿರುವ ಶಿವಮೊಗ್ಗದ ಯುವಕನೊಬ್ಬ ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಯಮಹಾ ಆರ್‌ಎಕ್ಸ್ ಬೈಕ್(Yamaha RX bike)ಅನ್ನು ಗದಗ ನಗರದಲ್ಲಿ ಖರೀದಿಸಿ ತಂದು ಇದೀಗ ಪೇಚಿಗೆ ಸಿಲುಕಿದ್ದಾರೆ.
31 ವರ್ಷದ ಇಂಜಿನಿಯರ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿ ವಂಚನೆಗೊಳಗಾಗಿದ್ದಾರೆ. ಕಳೆದ 4 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಸೆಕೆಂಡ್ ಹ್ಯಾಂಡ್ ಬೈಕ್(second hand bike) ಖರೀದಿಸಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದಾಗ ಗದಗದಲ್ಲಿ ಒಂದು ಬೈಕ್ ಇರುವುದು ಕಂಡುಬಂದಿತ್ತು. ಅದರ ಮಾಲೀಕನನ್ನು ಸಂಪರ್ಕಿಸಿದಾಗ ಆತ 2020ರಲ್ಲಿ ಬೈಕ್ ಖರೀದಿಸಿದ್ದು, ಈಗ ಹಣದ ತುರ್ತು ಇರುವುದರಿಂದ 55 ಸಾವಿರ ರೂ.ಗೆ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದ.
ಅದನ್ನು ನಂಬಿದ ಇಂಜಿನಿಯರ್ ಗದಗಕ್ಕೆ ತನ್ನ ಅಳಿಯನನ್ನು ಕಳುಹಿಸಿ ಆನ್‌ಲೈನ್ ಮೂಲಕ 2026ರ ಫೆ.13ರಂದು ಹಣ ಪಾವತಿಸಿ ಬೈಕ್ ಮತ್ತು ಆರ್‌ಸಿ ಕಾರ್ಡ್(Bike and RC card) ಪಡೆದುಕೊಂಡಿದ್ದರು. ಇಂಜಿನಿಯರ್ ಸೌದಿಯಿಂದ ಶಿವಮೊಗ್ಗಕ್ಕೆ ರಜೆ ಮೇಲೆ ಬಂದಾಗ ಸ್ಥಳೀಯವಾಗಿ ಓಡಾಟಕ್ಕೆ ಆ ಬೈಕ್ ಬಳಸುತ್ತಿದ್ದರು. ಕಳೆದ ಬುಧವಾರ ಸಂಜೆ ಗೋಪಾಳದ ವಿನಾಯಕ ಸರ್ಕಲ್(Vinayak Circle) ಹತ್ತಿರ ಬೈಕ್‌ನ ಹೆಲ್ಮೇಟ್ ಹಾಕದೆ ಚಲಿಸುತ್ತಿದ್ದಾಗ ಸಂಚಾರ ಪೊಲೀಸರು ಬೈಕ್ ತಡೆದು ತಪಾಸಣೆ ಮಾಡಿದಾಗ ಶಾಕ್ ಕಾದಿತ್ತು. 
2019ರಲ್ಲಿ ಬೆಂಗಳೂರಿನ ಮಾಗಡಿ ರಸ್ತೆ(Bangalore Magadi Road) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಅದಾಗಿತ್ತು. ಪೊಲೀಸರು ತಕ್ಷಣವೇ ಬೈಕ್‌ನ ಇಂಜಿನ್ ನಂಬರ್ ಹಾಗೂ ಚಾಸ್ಸಿ ನಂಬರ್ ಪರಿಶೀಲಿಸಿದಾಗ ಕಳ್ಳತನವಾಗಿದ್ದ ಬೈಕ್ ಅದೇ ಎಂಬುದು ದೃಢಪಟ್ಟಿತ್ತು. 
ಕಳ್ಳತನದ ಬೈಕ್‌ನ ನಂಬರ್ ಬಳಸಿ ಬೇರೊಂದು ಬೈಕಿಗೆ ನಕಲಿ ಆರ್‌ಸಿ ಕಾರ್ಡ್(Fake RC card), ನಕಲಿ ಇಂಜಿನ್ ಮತ್ತು ಚಾಸ್ಸಿ ನಂಬರ್ ಮುದ್ರಿಸಿದ್ದು ತಾನು ಮೋಸ ಹೋಗಿರುವುದನ್ನು ಅರಿತ ಇಂಜಿನಿಯರ್ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net