ಗವಟೂರು ಗ್ರಾಮದ ಆಶ್ರಯ ಬಡಾವಣೆ ಜಮೀನನ್ನು ರಕ್ಷಿಸುವಂತೆ ಒತ್ತಾಯಿಸಿ ನಿವೇಶನ ರಹಿತರು ನಾಡಕಚೇರಿ ಉಪ ತಹಸೀಲ್ದಾರ್ ಗೌತಮ್ ಅವರಿಗೆ ಮನವಿ ಸಲ್ಲಿಸಿದರು. ಜಿ.ಎಸ್.ವರದರಾಜ್, ಶೇಖರಪ್ಪ, ಗಫೂರ್ ಇತರರಿದ್ದರು.
ರಿಪ್ಪನ್‌ಪೇಟೆ: ಪಟ್ಟಣ ಸಮೀಪದ ಗವಟೂರು ಗ್ರಾಮದಲ್ಲಿ ಕೆಲವರು ಅತಿಕ್ರಮಣ ಮಾಡಿರುವ ಆಶ್ರಯ ಬಡಾವಣೆ ಜಾಗವನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಿವೇಶನ ರಹಿತರು ನಾಡಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
1991-92ರಲ್ಲಿ ಸರ್ಕಾರ ಗವಟೂರು ಗ್ರಾಮದ ಸರ್ವೇ ನಂಬರ್ 260/2ರಲ್ಲಿ ನಿವೇಶನ ರಹಿತರ ವಸತಿ ಉದ್ದೇಶಕ್ಕಾಗಿ 2.05 ಎಕರೆ ಜಾಗವನ್ನು ಆಶ್ರಯ ಬಡಾವಣೆಯನ್ನಾಗಿ ನಿರ್ಮಿಸಿ 23 ಫಲಾನುಭವಿಗಳನ್ನು ಆಯ್ಕೆಮಾಡಿ ನಿವೇಶನ ಹಂಚಿಕೆ ಮಾಡಿತ್ತು. ನಿವೇಶನ ಪಡೆದ ಬಹುತೇಕರು ಕೂಲಿ ಕಾರ್ಮಿಕರಾಗಿದ್ದರಿಂದ ಮನೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಆದರೆ ಓರ್ವ ವ್ಯಕ್ತಿ ಬಡಾವಣೆಯ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರಿದರು.
ಆಶ್ರಯ ಬಡಾವಣೆ ಜಮೀನನ್ನು ಗ್ರಾಪಂಗೆ ಹಸ್ತಾಂತರಿಸುವಂತೆ ಕೋರಿ ಕಂದಾಯ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಪುರಸ್ಕರಿಸಿದ ಆಡಳಿತ ವ್ಯವಸ್ಥೆ ಇತ್ತೀಚೆಗೆ ಸೂಕ್ತ ಕ್ರಮಕ್ಕಾಗಿ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಹೊಸನಗರ ತಹಸೀಲ್ದಾರರು ಗ್ರಾ ಪಂ ಅಧಿಕಾರಿಗಳ ಸಹಕಾರ ಪಡೆದು, ಪೊಲೀಸರ ರಕ್ಷಣೆಯೊಂದಿಗೆ ಜಾಗ ತೆರವುಗೊಳಿಸುವಂತೆ ಕಂದಾಯ ನಿರೀಕ್ಷಕರಿಗೆ ಅದೇಶಿಸಿದ್ದಾರೆ. ಆದರೆ ಜಾಗವನ್ನು ಕಬಳಿಸುವ ಉದ್ದೇಶದಿಂದ ಒತ್ತುವರಿದಾರ ತಡೆಯೊಡ್ದುತ್ತಿದ್ದಾರೆ. ಇನ್ನೋರ್ವ ಒತ್ತುವರಿದಾರನೂ ಸಹ ಭೂಮಿ ಬಿಟ್ಟುಕೊಡುತ್ತಿಲ್ಲ. ಅತಿಕ್ರಮಣದಾರರ ಮೇಲೆ ಪ್ರಕರಣ ದಾಖಲಿಸಬೇಕು ಹಾಗೂ ಆಶ್ರಯ ಬಡಾವಣೆ ಜಮೀನು ಶೀಘ್ರ ತೆರವುಗೊಳಿಸಿ ಜನರ ಉಪಯೋಗಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.