ಸೊರಬದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನದ ಸಭಾ ಕಾರ್ಯಕ್ರಮವನ್ನು ಶ್ರೀ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಡಿ.ಮಂಜುನಾಥ, ಡಾ. ಎಂ.ಕೆ.ಮಹೇಶ್, ಡಾ. ಉಮೇಶ್ ಭದ್ರಾಪುರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಿ
ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಸಲಹೆ
ಮನೆಗೊಂದು ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ
ಸೊರಬ: ಮನುಷ್ಯನು ಶ್ರಮ, ಸಂಸ್ಕಾರದ ಜತೆ ಒಳ್ಳೆಯ ಗುರಿಯೊಂದಿಗೆ ಜೀವನದಲ್ಲಿ ಮುನ್ನಡೆದಾಗ ಯಶಸ್ಸು ಲಭಿಸುತ್ತದೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಸಾಹಿತಿ ಡಾ. ಉಮೇಶ್ ಭದ್ರಾಪುರ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನದ ಗ್ರಂಥಾಲಯ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಪುಸ್ತಕದ ಬಗ್ಗೆ ಜಾಗೃತಿ ಮೂಡಿಸಲು ಅತ್ಯಂತ ಉಪಯುಕ್ತ ಕಾರ್ಯಕ್ರಮ ಇದಾಗಿದ್ದು ಮೊಬೈಲ್ ಅತಿಯಾದ ಬಳಕೆ ಮಾರಕ ಕಾಯಿಲೆಗಳಿಗಿಂತಲೂ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಬೇಕು. ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಬೇಕು. ಒಂದು ಪುಸ್ತಕ, ಗ್ರಂಥಾಲಯ ಉತ್ತಮ ವ್ಯಕ್ತಿಯನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಮೊದಲ ಗ್ರಂಥಾಲಯವಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಸಚಿವ ಮಧು ಬಂಗಾರಪ್ಪ ಅವರ ಸಹಕಾರದಿಂದ ಎಸ್.ಬಂಗಾರಪ್ಪ ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಗ್ರಂಥಾಲಯ ಮಾಡಲಾಗಿದೆ. ಸಂಶೋಧನೆ ಕ್ಷೇತ್ರದಲ್ಲಿ ತೊಡಗಿರುವವರಿಗೆ ಮತ್ತು ಸಾಹಿತ್ಯ ಓದುಗರಿಗೆ ಅನುಕೂಲವಾಗಲಿದೆ ಎಂದರು.
ಸಮಾಜಮುಖಿ ಹಾಗೂ ಧನಾತ್ಮಕ ಕಾರ್ಯಗಳನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಾಡುತ್ತಿದೆ. ಮೊಬೈಲ್ ಕಾಯಿಲೆಗೆ ಯುವ ಸಮೂಹ ಒಳಗಾಗಿದ್ದು ಅದನ್ನು ತಡೆಗಟ್ಟಲು ಇರುವ ಮಾರ್ಗವೆಂದರೆ ಪುಸ್ತಕ ಓದುವುದು. ಮಾನಸಿಕ ಆರೋಗ್ಯದಿಂದ ಇರಲು ಇಂತಹ ಕಾರ್ಯಕ್ರಮ ಪೂರಕ. ಡಾ. ಎಂ.ಕೆ.ಮಹೇಶ್, ಹಿರಿಯ ಆಯುಷ್ ವೈದ್ಯ
ಸಾಹಿತಿ ಚಂದ್ರೇಗೌಡ ಮಾತನಾಡಿ, ಪುಸ್ತಕವು ಬದುಕು, ಭಾಷೆ ಮತ್ತು ನಡವಳಿಕೆಗಳನ್ನು ಹೇಳಿಕೊಡುತ್ತದೆ. ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿಕೊಂಡ ಮೇಲೆ 6 ವರ್ಷ ಓದುವ ಅಭಿರುಚಿ ಬೆಳೆಸಿಕೊಂಡೆ. ಅದೇ ಪುಸ್ತಕ ಬರೆಯಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಮಾತನಾಡಿ, ಒಂದು ಪುಸ್ತಕ ಸಾವಿರ ಸ್ನೇಹಿತರಿಗೆ ಸಮ. ಹೆಚ್ಚು ಪುಸ್ತಕಗಳನ್ನು ಓದಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿ ಮನೆಯಲ್ಲೂ ಒಂದು ಗ್ರಂಥಾಲಯ ಆರಂಭವಾಗಬೇಕು ಎಂದು ತಿಳಿಸಿದರು.
ಕಲಾವಿದ ವಿಶ್ವನಾಥ್ ಹೆಚ್ಚೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಗೌರವಾಧ್ಯಕ್ಷ ಪ್ರಕಾಶ್ ಮಡ್ಲೂರು ಅವರನ್ನು ಸನ್ಮಾನಿಸಲಾಯಿತು. ಸಂಗೀತಾ ಚೌಹಾಣ್, ಗುಡ್ಡಪ್ಪ ಜೋಗಿ ಗಾಯನ ನಡೆಸಿಕೊಟ್ಟರು.
ಸಾಹಿತಿ ಡಾ. ಉಮೇಶ್ ಭದ್ರಾಪುರ, ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಸುರೇಶಪ್ಪ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್, ಸಾರ್ವಜನಿಕ ಗ್ರಂಥಾಲಯ ಸಹಾಯಕ ಅಧಿಕಾರಿ ಕೃಷ್ಣಮೂರ್ತಿ, ಡಿ.ಶಿವಯೋಗಿ, ವೀಣಾ ನಾಯ್ಕ, ಜಯಮಾಲಾ, ಮಹೇಶ್ ಖಾರ್ವಿ ಇತರರಿದ್ದರು.