ದೇವಗಂಗೆಯಲ್ಲಿ ಎಳ್ಳಮಾವಾಸ್ಯೆ ನಾಳೆ | Ellamavasya

ದೇವಗಂಗೆ ಕೊಳದ ಬಳಿ ಗ್ರಾಮಸ್ಥರು ಎಳ್ಳಮಾವಾಸ್ಯೆ ಸಿದ್ಧತೆ ನಡೆಸುತ್ತಿರುವುದು.
ದೇವಗಂಗೆ ಕೊಳದ ಬಳಿ ಗ್ರಾಮಸ್ಥರು ಎಳ್ಳಮಾವಾಸ್ಯೆ ಸಿದ್ಧತೆ ನಡೆಸುತ್ತಿರುವುದು.
Published on
ಹೊಸನಗರ: ತಾಲೂಕಿನ ಐತಿಹಾಸಿಕ ದೇವಗಂಗೆ ಶ್ರೀ ಗಂಗಾಧರೇಶ್ವರ ಸನ್ನಿಧಿಯಲ್ಲಿ ಡಿ.19ರಂದು ಸಂಭ್ರಮದ ಎಳ್ಳಮಾವಾಸ್ಯೆ, ಇದೇ ಮೊದಲ ಬಾರಿಗೆ ಗಂಗಾರತಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ದೇವಗಂಗೆ ಕೊಳದಲ್ಲಿ ಪವಿತ್ರ ತೀರ್ಥಸ್ನಾನ, ಶ್ರೀ ಗಂಗಾಧರೇಶ್ವರ ದೇವರಿಗೆ ಬೆಳಗಿನ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ 6ರಿಂದ ಗಂಗಾರತಿ, ಕೊಳದಲ್ಲಿ ತೆಪ್ಪೋತ್ಸವ, ಶ್ರೀ ಮೆಕ್ಕೆಕಟ್ಟು ಮೇಳದವರಿಂದ ಪೌರಾಣಿಕ ರಾಜ ರುದ್ರಕೋಪ, ಅಭಿಮನ್ಯು ಯಕ್ಷಗಾನ ಪ್ರದರ್ಶನ ಆಗಲಿದೆ. ಈ ಬಾರಿ ವಿಶೇಷವಾಗಿ ಪೆರ್ಡೂರು ಅಶೋಕ್ ಮತ್ತು ಎಸ್.ಕೆ.ನವೀನ್ ತಂಡದಿಂದ ವಿದ್ಯುತ್ ಬೆಳಕಿನ ದೃಶ್ಯ ವೈಭವವನ್ನು ಆಯೋಜಿಸಲಾಗಿದೆ. ಜಾತ್ರೆ ರೂಪದಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಶೇಷತೆ: ದೇವಗಂಗೆ ಹೆಸರೇ ಪಾವಿತ್ರೃವನ್ನು ಸೂಚಿಸುತ್ತದೆ. ಪೂಜನೀಯ ಭಾವವನ್ನು ಕೊಡುವ ಬಿದನೂರು ಸಂಸ್ಥಾನದ ತಾಣ. ಇಲ್ಲಿಯ ಹೆಮ್ಮೆಯ ಅರಸು ಪ್ರಜಾವತ್ಸಲರಾದ ಕಾರಣ ಉತ್ತರದ ಕಾಶಿಯಂತೆ ಈ ತಾಣವನ್ನು ದಕ್ಷಿಣದ ಕಾಶಿಯಾಗಿಸಿ, ಗಂಗೆಯನ್ನೇ ಇಲ್ಲಿಗೆ ತರಿಸಿ, ಗಂಗಾಧರೇಶ್ವರನ ಸನ್ನಿಧಿಯಲ್ಲಿ ದೇವಗಂಗೆಯನ್ನೇ ನಿರ್ಮಿಸಿದರು. ಕಲ್ಲಿನಲ್ಲಿ ಹೂವರಳಿಸಿದರು ಎಂಬ ಪ್ರತೀತಿ ಇದೆ. ಆ ಸ್ಮರಣೆಯೊಂದಿಗೆ ಇಂದು ಇಲ್ಲಿ ಪವಿತ್ರ ಗಂಗಾಸ್ನಾನ ಮಾಡುವ ಮೂಲಕ ಇತಿಹಾಸವನ್ನು ಮರುಸೃಷ್ಟಿಸೋಣ. ಕಾಶಿಯ ಗಂಗಾತೀರದ ಗಂಗಾರತಿಯನ್ನು ಬಿದನೂರು ನಗರದ ದೇವಗಂಗೆಯ ಕೊಳದ ನಡುವೆ ಆಚರಿಸೋಣ, ದೀಪಾರತಿ ಬೆಳಗೋಣ ಎಂಬ ಆಶಯದೊಂದಿಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಸಮಿತಿ, ಗ್ರಾಮಸ್ಥರು, ಸರ್ವರ ಸಹಕಾರದೊಂದಿಗೆ ಎಳ್ಳಮಾವಾಸ್ಯೆ ಜಾತ್ರೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net