ಆನೆಗಳ ಚಲನವಲನ ಡ್ರೋನ್‌ನಲ್ಲಿ ಸೆರೆ | Elephant

ತಾಲೂಕಿನ ದೂಗೂರು-ಉಳವಿ ರಸ್ತೆಯಲ್ಲಿ ಆನೆ ನೋಡಲು ಸೇರಿದ್ದ ಜನ.
ತಾಲೂಕಿನ ದೂಗೂರು-ಉಳವಿ ರಸ್ತೆಯಲ್ಲಿ ಆನೆ ನೋಡಲು ಸೇರಿದ್ದ ಜನ.
Published on
ಸೊರಬ: ಉಳವಿ ಹೋಬಳಿಯ ಬರಗಿ ಕಾಡಿನಂಚಿನಲ್ಲಿ ಎರಡು ಕಾಡಾನೆಗಳ ಚಲನವಲನ ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಣ್ಣೂರು, ಕೈಸೋಡಿ, ದೂಗೂರು, ಕ್ಯಾಸನೂರು, ಉಮಟೆಗದ್ದೆ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಎರಡು ಕಾಡಾನೆಗಳು ಭತ್ತ, ಕಬ್ಬಿನ ಬೆಳೆಗಳನ್ನು ನಾಶ ಮಾಡುತ್ತಿವೆ. ಕಾಡಾನೆಗಳನ್ನು ಕಾಡಿಗಟ್ಟುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ವಿಫಲವಾಗಿದೆ. ಹಾಗಾಗಿ ಆನೆಗಳ ಸೆರೆಗೆ ಸಕ್ರೆಬೈಲ್ ಆನೆ ಬಿಡಾರದಿಂದ ನಾಲ್ಕು ಆನೆಗಳನ್ನು ಕರೆತಂದು ಮಂಗಳವಾರದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ.
ಚಾಣಾಕ್ಷ ಕಾಡಾನೆಗಳು ದೂಗೂರು ಕಾಡಿನಿಂದ ಆಗಮಿಸಿ ಉಳವಿ ಕೆರೆಯಲ್ಲಿ ನೀರುಕುಡಿದು ಉಳವಿ ಫೈಯಾಜ್ ಅಹಮ್ಮದ್ ಅವರ ಬಾಳೆ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ. ನಂತರ ಉಳವಿ ಪಟ್ಟಣದ ಹೊಸಬಾಳೆ ರಸ್ತೆಯಲ್ಲಿ ಸಂಚರಿಸಿರುವ ಕುರುಹು ದೊರೆತ ಕಾರಣ ಮಂಗಳವಾರ ಸಂಜೆವರೆಗೂ ದೂಗೂರು ಹೊರಬೈಲು ಕಾಡಿನ ಸುತ್ತಮುತ್ತ ಅರಣ್ಯಾಧಿಕಾರಿಗಳು, ಎಲಿಫೆಂಟ್ ಟಾಸ್ಕ್‌ಫೋರ್ಸ್ ಹಾಗೂ ಸಿಬ್ಬಂದಿ ಕೂಂಬಿಂಗ್ ಮಾಡಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಸಂಜೆ ಬರಗಿಯಿಂದ ಸಾಗರ-ಸೊರಬ ರಸ್ತೆಗೆ ಸೇರುವ ಬರಗಿ ಕಾಡಂಚಿನಲ್ಲಿ ಇರುವುದನ್ನು ಥರ್ಮಲ್ ಡ್ರೋನ್ ಕ್ಯಾಮರ ಪತ್ತೆ ಹಚ್ಚಿದೆ. ಆದರೆ ಕಾರ್ಯಾಚರಣೆಗೆ ಬಂದ ಆನೆಗಳು ವಿಶ್ರಾಂತಿಗೆ ತೆರೆಳಿದ್ದರಿಂದ ಎಲಿಫೆಂಟ್ ಟಾಸ್ಕ್‌ಫೋರ್ಸ್ ತಂಡ ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.
ಉಳವಿ ದೂಗೂರು ಬಳಿ ಸಾಗರ ರಸ್ತೆಯಲ್ಲಿ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಆನೆಗಳನ್ನು ನೋಡಲು ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಸೊರಬ ತಾಲೂಕು ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಹರಸಾಹಸಪಟ್ಟರು. ಜಮೀನಿನ ಕೆಲಸಕ್ಕೆ ಇಳಿಯದಂತೆ ದೂಗೂರು ಮತ್ತು ಭದ್ರಾಪುರ ರೈತರಿಗೆ ಎಚ್ಚರಿಕೆ ನೀಡಲಾಗಿದೆ.
ಡಿಸಿಎಫ್ ಮೋಹನ್‌ಕುಮಾರ್, ಎಸಿಎಫ್ ಸುರೇಶ್, ರವೀಂದ್ರ ನಾಯಕ್, ಅಣ್ಣಪ್ಪ, ಶ್ರೀಪಾದ ನಾಯ್ಕ ಶಾಂತಪ್ಪ, ರಾಮಪ್ಪ, ಯೋಗರಾಜ್, ಅರಣ್ಯ ಇಲಾಖೆ ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net