ಸಕ್ರೆಬೈಲ್ ಬಿಡಾರದಲ್ಲಿ ಸರಳವಾಗಿ ಆನೆ ದಿನಾಚರಣೆ | Elephant Day
ಶಿವಮೊಗ್ಗ ಸಕ್ರೆಬೈಲ್‌ನ ಬಿಡಾರದಲ್ಲಿ ಆನೆ ದಿನಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರತಿವರ್ಷ ಇರುತ್ತಿದ್ದ ಸಂಭ್ರಮ ಈ ಬಾರಿ ಮರೆ
ಪ್ರವಾಸಿಗರ ನಿರ್ಬಂಧ ಹಿನ್ನೆಲೆ ಅಧಿಕಾರಿ, ಸಿಬ್ಬಂದಿ ಭಾಗಿ
ಆನೆಗಳಿಗೆ ಕಬ್ಬು, ಸಿಹಿ, ವಿವಿಧ ಹಣ್ಣುಹಂಪಲು ತಿನ್ನಿಸಿದ ಸಿಬ್ಬಂದಿ
ಶಿವಮೊಗ್ಗ: ವಿಶ್ವ ಆನೆ ದಿನ(World Elephant Day)ವನ್ನು ಬುಧವಾರ ಸಕ್ರೆಬೈಲ್‌ನಲ್ಲಿ ಸರಳವಾಗಿ ಆಚರಿಸಲಾಯಿತು. ಬಿಡಾರಕ್ಕೆ ಪ್ರವಾಸಿಗರ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾವುತರು ಆನೆಗಳನ್ನು ವಿವಿಧ ಬಣ್ಣ ಹಾಗೂ ಹೂವುಗಳಿಂದ ಸಿಂಗರಿಸಿ ವಿಶೇಷ ಪೂಜೆಯೊಂದಿಗೆ ಆನೆ ದಿನಾಚರಣೆಗೆ ಚಾಲನೆ ನೀಡಲಾಯಿತು. ಬಿಡಾರದ ಸಿಬ್ಬಂದಿ ಭಾಗವಹಿಸಿ ಆನೆಗಳಿಗೆ ಕಬ್ಬು, ಸಿಹಿ ಹಾಗೂ ವಿವಿಧ ಹಣ್ಣುಹಂಪಲುಗಳನ್ನು ತಿನ್ನಿಸಿದರು.
ಶಿವಮೊಗ್ಗ ಡಿಎಫ್‌ಒ ಪ್ರಸನ್ನ ಪಟಗಾರ್ (DFO Prasanna Patagar)ಮಾತನಾಡಿ, ಆನೆಗಳ ಸಂರಕ್ಷಣೆಗಾಗಿ ವಿಶ್ವವನ್ನು ಒಗ್ಗೂಡಿಸಬೇಕೆಂಬ ಸಂಕಲ್ಪದೊಂದಿಗೆ ಈ ಬಾರಿ ವಿಶ್ವ ಆನೆಗಳ ದಿನವನ್ನು ಆಚರಿಸುತ್ತಿದ್ದೇವೆ. ಈವರೆಗೆ ಸಕ್ರೆಬೈಲ್(Sakrebyle) ಆನೆ ಬಿಡಾರದಲ್ಲಿ ಎಂದಿನಂತೆ ಆನೆ ದಿನಾಚರಣೆ ನಡೆಸುತ್ತಿದ್ದೆವು. ಆದರೆ ಪ್ರಸ್ತುತ ಬಿಡಾರಕ್ಕೆ ನಿರ್ಬಂಧ ಇರುವ ಕಾರಣದಿಂದ ಕ್ರಾಲ್ನಲ್ಲಿ ಆಚರಿಸುತ್ತಿದ್ದೇವೆ. ಬಿಡಾರದಲ್ಲಿ 19 ಗಂಡು ಮತ್ತು 5 ಹೆಣ್ಣು ಸೇರಿ ಒಟ್ಟು 24 ಆನೆಗಳಿವೆ. ಇಂದಿನ ಪೂಜೆಯಲ್ಲಿ 13 ಆನೆಗಳು ಪಾಲ್ಗೊಂಡಿದ್ದವು ಎಂದರು.
ಅಡ್ಕಾ ಬಡ್ಕಾ ಆನೆಗೆ ಚಿಕಿತ್ಸೆ ನೀಡಲಾಗಿದ್ದು, ಅದು ಈಗ ಗುಣಮುಖವಾಗಿದೆ. ವಿಕ್ರಾಂತ್ ಆನೆ(Vikrant elephant)ಗೆ ಸ್ವಲ್ಪ ಕಾಲು ನೋವಿದ್ದು, ಮುಂದಿನ 20 ದಿನಗಳಲ್ಲಿ ಸರಿಯಾಗಲಿದೆ. ಹಾಗೆಯೇ ಸಾಗರ, ಬಾಲಣ್ಣ ಗುಣವಾಗಿವೆ. ಬಾಲಣ್ಣ ಸೇರಿ ಒಟ್ಟು 2 ಆನೆಗಳು ಸದ್ಯ ಮದದಲ್ಲಿವೆ ಎಂದು ಮಾಹಿತಿ ನೀಡಿದರು.
ಆನೆ ಬಿಡಾರ(Elephant camp)ಕ್ಕೆ ಪ್ರವೇಶ ಹಾಗೂ ಭದ್ರತಾ ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಸ್‌ಒಪಿ(SOP)ಯನ್ನು ಅಳವಡಿಸುತ್ತಿದ್ದೇವೆ. ಅದರ ಭಾಗವಾಗಿ ಬಿಡಾರದಲ್ಲಿ ಬ್ಯಾರಿಕೇಡ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಈಗಾಗಲೇ ಬಿಡಾರದಲ್ಲಿ 4 ಕಡೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸಿಗರು(Tourists) ಆನೆಗಳನ್ನು ನೋಡಬಹುದು. ಆದರೆ ಅವುಗಳಿಗೆ ಸ್ನಾನ ಮಾಡಿಸುವುದಕ್ಕೆ ಇನ್ಮುಂದೆ ಅವಕಾಶವಿಲ್ಲ. ಈ ತಿಂಗಳ ಅಂತ್ಯದೊಳಗೆ ಎಲ್ಲ ಪ್ರಕ್ರಿಯೆ ಮುಗಿಸಿ ಬಿಡಾರವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಸಾಧ್ಯತೆ ಇದ್ದು, ಜನವಸತಿ ಪ್ರದೇಶಗಳಲ್ಲಿ ಉಪಟಳ ನೀಡುವ ಆನೆಗಳನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಿದ್ದೇವೆ ಎಂದು ಹೇಳಿದರು.
ಮರೆಯಾದ ಸಂಭ್ರಮ
ಪ್ರತಿ ವರ್ಷ ವಿಶ್ವ ಆನೆ ದಿನದಂದು ಸಕ್ರೆಬೈಲ್‌ನ ಬಿಡಾರ ಪ್ರವಾಸಿಗರಿಂದ ಭರ್ತಿಯಾಗಿರುತ್ತಿತ್ತು. ಮಕ್ಕಳು, ಮಹಿಳೆಯರು, ವಯಸ್ಕರು ಎನ್ನದೆ ಎಲ್ಲ ವರ್ಗದವರೂ ಬಿಡಾರಕ್ಕೆ ಭೇಟಿ ನೀಡಿ ಅಲಂಕಾರಗೊಂಡ ಆನೆಗಳನ್ನು ಕಣ್ತುಂಬಿಕೊಂಡು ಖುಷಿಪಡುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಬಿಡಾರಕ್ಕೆ ಸಾರ್ವಜನಿಕರಿಗೆ ಅವಕಾಶ ನಿರ್ಬಂಧವಿರುವ ಕಾರಣ ಬಿಡಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಆನೆ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಬಿಡಾರದಲ್ಲಿ ಆನೆ ವೀಕ್ಷಣೆಗೆ ಪ್ರತಿ ವರ್ಷ ಇರುತ್ತಿದ್ದ ಸಂಭ್ರಮ ಮಾಯವಾಗಿತ್ತು.