ಭೂಮಿ ಹಕ್ಕಿಗಾಗಿ ಚುನಾವಣೆ ಬಹಿಷ್ಕಾರ | Drowning victims meeting
ತುಮರಿಯಲ್ಲಿ ಆಯೋಜಿಸಿದ್ದ ಮುಳುಗಡೆ ಸಂತ್ರಸ್ತರ ಮುಂದಿನ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅ.ನಾ.ಚಂದ್ರಶೇಖರ್, ಅರುಣ್, ಗೋವರ್ಧನ, ಚಕ್ರಪಾಣಿ, ಗಣಪತಿ ಇತರರಿದ್ದರು.
Published on:
Copied
Follow Us
ತುಮರಿ: ದಶಕಗಳಿಂದ ಜಮೀನಿನ ಹಕ್ಕಿಗಾಗಿ ಹೋರಾಡುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರಗಳು ತಕ್ಷಣವೇ ಶಾಸನಬದ್ಧ ನ್ಯಾಯ ಒದಗಿಸದಿದ್ದರೆ, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ತುಮರಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಂತ್ರಸ್ತರ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಪ್ರಸ್ತುತ ಗೆಜೆಟ್ ನೋಟಿಫಿಕೇಶನ್‌ಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶವಿದೆ. ಸಂತ್ರಸ್ತರೆಲ್ಲರೂ ಒಗ್ಗೂಡಿ ಜಂಟಿಯಾಗಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಯಿತು.
ವೇದಿಕೆ ಸಂಚಾಲಕ ಅ.ನಾ.ಚಂದ್ರಶೇಖರ್ ಮಾತನಾಡಿ, ನಮ್ಮ ಪೂರ್ವಜರು ಮುಳುಗಡೆಯಾಗಿ ವಲಸೆ ಬಂದ ಸಮಯದಲ್ಲಿ ತಾವು ಸಾಗುವಳಿ ಮಾಡುತ್ತಿರುವ ಜಮೀನು ಯಾವ ವ್ಯಾಪ್ತಿಗೆ ಸೇರಿದೆ ಎಂಬುದು ತಿಳಿಯದೆ ಬದುಕು ಕಟ್ಟಿಕೊಂಡಿದ್ದರು. ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಈ ಜಮೀನುಗಳನ್ನು ಸಂತ್ರಸ್ತರಿಗೆ ಮಂಜೂರು ಮಾಡಿಸುವುದೇ ನಮ್ಮ ಹೋರಾಟದ ಮುಖ್ಯ ಉದ್ದೇಶ ಎಂದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು 7ನೇ ಬಾರಿಗೆ ಗೆಜೆಟ್‌ನಲ್ಲಿ ಮಂಡಿಸಿದೆ. ವರದಿಯ ಷರತ್ತುಗಳಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಲಿದೆ. ಪರಿಸರ ಸೂಕ್ಷ್ಮ ವಲಯ, ಪರಿಭಾವಿತ ಅರಣ್ಯ, ವನ್ಯಜೀವಿ ವಲಯ ಹಾಗೂ ಸಿಂಗಳೀಕ ಬರ್ ಜೋನ್ ನೆಪದಲ್ಲಿ ಜನರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಈ ಭಾಗದಲ್ಲಿ ಒಂದೇ ಒಂದು ಸಿಂಗಳೀಕ ಇಲ್ಲದಿದ್ದರೂ ‘ಬರ್ ಜೋನ್’ ಮಾಡಲಾಗಿದೆ. ಪಶ್ಚಿಮಘಟ್ಟದಲ್ಲಿ ಮನುಷ್ಯರಿಲ್ಲದೆ ಕೇವಲ ಪ್ರಾಣಿ ಮತ್ತು ಕಾಡು ಮಾತ್ರ ಇರಬೇಕು ಎಂಬ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಸೂಚಿಯನ್ನು ಸರ್ಕಾರಗಳು ಅನುಷ್ಠಾ ನಗೊಳಿಸುತ್ತಿವೆ ಎಂದರು.
ವೇದಿಕೆಯ ಸಂಚಾಲಕ ಚಕ್ರಪಾಣಿ, ಅರುಣ್, ರೈತರಾದ ಗೋವರ್ಧನ, ಗಣಪತಿ, ದಿನಕರ್, ಮೋಹನ ಇತರರಿದ್ದರು.