‘ಒಒಎಸ್‌ಸಿಮುಕ್ತ ಶಿವಮೊಗ್ಗ’ಕ್ಕೆ ಯತ್ನ | Special campaign

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿದ ತುಂಗಾನಗರ ಠಾಣೆ ಪೊಲೀಸರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿದ ತುಂಗಾನಗರ ಠಾಣೆ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಳ
  • ಮಕ್ಕಳ ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು
  • ಆರ್‌ಡಿಪಿಆರ್, ಪೊಲೀಸ್, ಕಂದಾಯ ಇಲಾಖೆಗಳ ಸಾಥ್
ನವೀನ್ ಬಿಲ್ಗುಣಿ ಶಿವಮೊಗ್ಗ
ಮಕ್ಕಳೇ.. ಶಾಲೆ ಆರಂಭ(School starts)ಗೊಂಡು ಒಂದೂವರೆ ತಿಂಗಳು ಕಳೆದರೂ ನೀವೂ ತರಗತಿಗೆ ಹೋಗುತ್ತಿಲ್ಲವೇ? ಕೆಲವೇ ದಿನಗಳಲ್ಲಿ ನಿಮ್ಮನ್ನೇ ಹುಡುಕಿಕೊಂಡು ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್‌ಪಿ ಸೇರಿ ಹಿರಿಯ ಅಧಿಕಾರಿಗಳೇ ಮನೆಗೆ ಬರಲಿದ್ದಾರೆ!
ಹೌದು. ಶಿವಮೊಗ್ಗ ತಾಲೂಕಿನಲ್ಲಿ ಇಂಥದ್ದೊಂದು ವಿಶೇಷ ಅಭಿಯಾನ(Special campaign)ಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡರೂ ನಾನಾ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಶಿವಮೊಗ್ಗ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಔಟ್ ಆಫ್ ಸ್ಕೂಲ್ ಚಿಲ್ಡ್ರನ್(Out of School Children)(ಒಒಎಸ್‌ಸಿ) ಮುಕ್ತ ಅಭಿಯಾನ ಕೈಗೊಂಡಿದೆ.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್.ಹೇಮಂತ್, ಎಸ್‌ಪಿ ಬಿ.ನಿಖಿಲ್ ಸೇರಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಪಂ ಅಧಿಕಾರಿ(ಪಿಡಿಒ)ಗಳು, ಶಾಲೆಗಳ ಮುಖ್ಯಶಿಕ್ಷಕರು(Headmaster) ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳ ಮನವೊಲಿಸಿ ಮರಳಿ ಶಾಲೆಗೆ ತೆರಳುವಂತೆ ಮಾಡುವರು. ಒಂದು ಮಗುವನ್ನಾದರೂ ಶಾಲೆಗೆ ಕರೆತರುವುದೇ ವಿಶೇಷ ಅಭಿಯಾನದ ಗುರಿಯಾಗಿದೆ.
ಹೊರಗುಳಿದ ಮಕ್ಕಳು 69: ಪ್ರಸ್ತುತ ಶಿವಮೊಗ್ಗ(Shimoga) ತಾಲೂಕಿನಲ್ಲೇ 69 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗುರುತಿಸಿದೆ. ಬಡತನ, ಪಾಲಕರೊಂದಿಗೆ ಗುಳೆ ಹೋಗುವುದು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ದುಶ್ಚಟಗಳ ದಾಸರಾಗಿರುವುದು, ಕೂಲಿ ಕೆಲಸಗಳಿಗೆ ತೆರಳುತ್ತಿರುವುದು ಒಳಗೊಂಡಂತೆ ನಾನಾ ಕಾರಣಗಳಿಂದ ಶಾಲೆಯಿಂದ ಮಕ್ಕಳು ದೂರವೇ ಉಳಿಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಾಲೆ ದೂರ ಎಂಬ ಕಾರಣಕ್ಕೂ ಕೆಲ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ವಿಪರ್ಯಾಸ.
ಹಲವು ಇಲಾಖೆ ಬೆಂಬಲ: ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆ ಮರಳಿ ಕರೆತರುವ ಪ್ರಯತ್ನವನ್ನು ಪ್ರತಿ ವರ್ಷ ಶಿಕ್ಷಣ ಇಲಾಖೆಯೊಂದೆ ಮಾಡುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ(Department of Education)ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ(ಆರ್‌ಡಿಪಿಆರ್), ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳು ಶಾಲಾ ಶಿಕ್ಷಣ ಇಲಾಖೆ ಜತೆ ಕೈಜೋಡಿಸಿದೆ. ಆ.15ರೊಳಗೆ ಅಭಿಯಾನ ಕೈಗೊಳ್ಳಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಅನೈತಿಕ ಚಟುವಟಿಕೆಗಳಲ್ಲಿ ಭಾಗಿ ಶಂಕೆ

ಶಾಲೆ ಬಿಟ್ಟಿರುವ ಮಕ್ಕಳಲ್ಲಿ ಬಹುತೇಕರು ಕೂಲಿ ಕೆಲಸಗಳಿಗೆ ತೆರಳುತ್ತಿದ್ದಾರೆ. ಕೆಲವರು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಗಾಂಜಾ, ಧೂಮಪಾನ, ಮದ್ಯದ ದಾಸರಾಗಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಮಿಷನ್ ಸುರಕ್ಷಾ ಯೋಜನೆ ಪ್ರೇರಣೆಯಿಂದ ವಿಶೇಷ ಅಭಿಯಾನವನ್ನು ಶಿವಮೊಗ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೈಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಸ್ಲಂಗಳು, ಆಟೋ ಕಾಂಪ್ಲೆಕ್ಸ್ ಒಳಗೊಂಡಂತೆ ಹಲವೆಡೆ ದಾಳಿ ಮಾಡಿ ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪೊಲೀಸರ ಕೆಲಸಕ್ಕೆ ಶ್ಲಾಘನೆ

ಈಗಾಗಲೇ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಶಾಲೆ ಬಿಟ್ಟ ಹತ್ತಾರು ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ವಿಶೇಷ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಶಾಲೆ ಬಿಟ್ಟಿದ್ದ ಮಕ್ಕಳನ್ನು ಶಾಲಾ ಶಿಕ್ಷಣ ಇಲಾಖೆ ನೆರವಿನೊಂದಿಗೆ ಪುನಃ ಶಾಲೆಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ದೊಡ್ಡಪೇಟೆ, ವಿನೋಬನಗರ ಠಾಣಾ ಪೊಲೀಸರು ಕೂಡ ವಿಶೇಷ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
"

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ವಿಶೇಷ ಅಭಿಯಾನದ ಉದ್ದೇಶವಾಗಿದೆ. ಡಿಸಿ, ಸಿಇಒ, ಎಸ್‌ಪಿ ಸೇರಿ ಅಧಿಕಾರಿಗಳು ಶಾಲೆ ಬಿಟ್ಟ ಒಬ್ಬೊಬ್ಬ ಮಗುವನ್ನು ಶಾಲೆಗೆ ಕರೆತರುವರು. ಈ ಮೂಲಕ ಒಒಎಸ್‌ಸಿ ಮುಕ್ತ ಶಿವಮೊಗ್ಗಕ್ಕೆ ಪಣ ತೊಟ್ಟಿದ್ದೇವೆ.

— ರಮೇಶ್, ಶಿವಮೊಗ್ಗ ಬಿಇಒ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net