ತ್ಯಾಗರ್ತಿ ಸಮೀಪದ ಜಂಬಾನಿ ಕ್ಯಾಂಪ್‌ನಲ್ಲಿ ಆಯೋಜಿಸಿದ್ದ ಮಿಷನ್ ಸುರಕ್ಷಾ ಕಾರ್ಯಕ್ರಮಕ್ಕೆ ಪಿಎಸ್‌ಐ ಪ್ರವೀಣ್ ಚಾಲನೆ ನೀಡಿದರು. ಸದಾನಂದ ಸ್ವಾಮಿ, ಮುನಿಯಪ್ಪ, ಡಾ. ಅನ್ನಪೂರ್ಣಾ ಇತರರಿದ್ದರು.
ತ್ಯಾಗರ್ತಿ: ಶಾಲೆಯು ಮಗುವಿಗೆ ಸುರಕ್ಷತೆಯ ತಾಣ. ಜತೆಗೆ ಸರಿಯಾದ ಮಾರ್ಗದತ್ತ ಕರೆದೊಯ್ಯುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ ಎಂದು ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.
ತಾಲೂಕಿನ ಜಂಬಾನಿ ಕ್ಯಾಂಪ್‌ನಲ್ಲಿ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳು ಹಾಗೂ ಗ್ರಾಪಂನಿಂದ ಆಯೋಜಿಸಿದ್ದ ಮಿಷನ್ ಸುರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಇದರಿಂದ ತಿಳಿವಳಿಕೆ ಹೆಚ್ಚುವ ಜತೆ ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಶಾಲೆ ಬಿಟ್ಟು ಬೇರೆ ಕಡೆ ಮಕ್ಕಳಿಗೆ ರಕ್ಷಣೆ ಸಿಗಲು ಸಾಧ್ಯವಿಲ್ಲ. ಮಗು ಹೊರಗಿನ ವಾತಾವರಣದಲ್ಲೂ ಹಾಳಾಗದಂತೆ ಪಾಲಕರು ನೋಡಿಕೊಳ್ಳಬೇಕು. ಮಿಷನ್ ಸುರಕ್ಷಾ ಯೋಜನೆ ಪ್ರಜ್ಞಾವಂತ ಮಕ್ಕಳನ್ನು ರೂಪಿಸಲು ಪೂರಕ ಕಾರ್ಯಕ್ರಮ ಎಂದು ತಿಳಿಸಿದರು.
ಆನಂದಪುರ ಠಾಣೆ ಪಿಎಸ್‌ಐ ಪ್ರವೀಣ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪೋಕ್ಸೋ ಪ್ರಕರಣ ಹೆಚ್ಚುತ್ತಿದ್ದು, ಬಡಕುಟುಂಬಗಳ ಮಕ್ಕಳು, ಸಿಂಗಲ್ ಪೇರೆಂಟ್ಸ್ ಮಕ್ಕಳು, ಶಾಲೆ ಬಿಟ್ಟ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಮಕ್ಕಳ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಿದೆ. ಪೊಲೀಸ್ ಇಲಾಖೆ ಶಾಲೆ ಬಿಟ್ಟ ಮಕ್ಕಳ ಪಟ್ಟಿ ಸಿದ್ಧಪಡಿಸಿದೆ. ಆನಂದಪುರ ಠಾಣಾ ವ್ಯಾಪ್ತಿಯಲ್ಲಿ 62 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಆ ಮನೆಗಳಿಗೆ ಪೊಲೀಸ್ ಇಲಾಖೆ ಭೇಟಿ ನೀಡಿ ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ವಾಪಸ್ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ಮುನಿಯಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ಸತೀಶ್, ವಿ.ಟಿ.ಸ್ವಾಮಿ, ಬರೂರು ಪಿಡಿಒ ರಾಜು, ಇಸಿಒ ಪಾಲಾಕ್ಷಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ, ಮುಖ್ಯಶಿಕ್ಷಕ ಮಂಜಪ್ಪ, ಎಎಸ್‌ಐ ಸಿದ್ದಾರೂಢ, ಸಿಆರ್‌ಪಿ ಮಂಜುಳಾ ಇತರರಿದ್ದರು.