ಇ-ಪೌತಿ ಖಾತೆ ಅಭಿಯಾನ ಮಂದಗತಿ I abhiyana shivamogga

ಶಿವಮೊಗ್ಗದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬಲ್ಕಿಷ್ ಬಾನು, ಪ್ರಭುಲಿಂಗ ಕವಳಿಕಟ್ಟಿ, ಸುಜಾತಾ, ವಿ.ಅಭಿಷೇಕ್, ರಾಜೇಂದ್ರ ಬಾಬು ಇದ್ದರು.
ಶಿವಮೊಗ್ಗದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬಲ್ಕಿಷ್ ಬಾನು, ಪ್ರಭುಲಿಂಗ ಕವಳಿಕಟ್ಟಿ, ಸುಜಾತಾ, ವಿ.ಅಭಿಷೇಕ್, ರಾಜೇಂದ್ರ ಬಾಬು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಂದಾಯ ಸಚಿವ ಕೃಷ್ಣಬೈರೇಗೌಡ ಗರಂ
  • ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ
  • ಬಾಕಿ ಇರುವ ಅರ್ಜಿಗಳನ್ನು ಗುರುತಿಸಲು ಸೂಚನೆ
ಶಿವಮೊಗ್ಗ: ಇ-ಪೌತಿ ಖಾತೆ (khata) ಅಭಿಯಾನ (abhiyana) ದಲ್ಲಿ ಶೇ.100 ಪ್ರಗತಿ ಸಾಧಿಸಬೇಕೆಂದು ನಾನು ನಿಬಂಧನೆ ಹಾಕಿಲ್ಲ. ಕಡೇಪಕ್ಷ ಶೇ.65-70ರಷ್ಟು ಪ್ರಗತಿಯಾದರೂ ಸಾಕು. ಖಾತೆಯಾಗಲು ಏನು ತೊಡಕಿದೆ ಎಂಬುದನ್ನು ಸಿಬ್ಬಂದಿ ಪ್ರತ್ಯೇಕವಾಗಿ ಗುರುತಿಸಬೇಕು. ಸಾರಾಸಗಟಾಗಿ ಎಲ್ಲವನ್ನೂ ತಿರಸ್ಕರಿಸುವುದು ಸರಿಯಲ್ಲ ಎಂದು ಕಂದಾಯ (revenue) ಸಚಿವ ಕೃಷ್ಣಬೈರೇಗೌಡ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯ ಕೆಲ ತಾಲೂಕಿನಲ್ಲಿ ಇ-ಪೌತಿ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಹಸೀಲ್ದಾರ್‌ಗಳು ಬೇರು ಮಟ್ಟಕ್ಕಿಳಿದು ಕೆಲಸ ಮಾಡದ ಹೊರತು ಅಭಿಯಾನ ಯಶಸ್ವಿ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇ-ಪೌತಿ ಖಾತೆಗಳು ಎಷ್ಟು, ಯಾವ ಕಾರಣಕ್ಕೆ ಬಾಕಿ ಇವೆ ಎನ್ನುವುದನ್ನು ಗುರುತಿಸಬೇಕು. ಇಲ್ಲದಿದ್ದರೆ ನಾನು ಜನರಿಗೆ ಉತ್ತರಿಸುವುದು ಹೇಗೆ? ನಾನು ಈ ಬಗ್ಗೆ ಎಷ್ಟು ಬಾರಿ ವಿವರಿಸಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದೇನೆ. ಆಗ ನೀವೆಲ್ಲ ನಿಮ್ಮದೇ ಲೋಕದಲ್ಲಿದ್ದಿರೇನೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಖಾತೆ ಮಾಡಬಹುದಾದ ಪ್ರಕರಣಗಳಲ್ಲೂ ಲೋಪ ಹುಡುಕಿ ಕಡತ ಬಾಕಿ ಇರಿಸುವುದನ್ನು ನಾನು ಒಪ್ಪುವುದಿಲ್ಲ. ಅಭಿಯಾನದ ಮೂಲಕ ಕೆಲಸ ಮಾಡಿದರೆ ಮಾತ್ರ ಹೆಚ್ಚು ಪ್ರಯೋಜನವಾಗಲಿದೆ. ಇದರಲ್ಲಿ ಉತ್ತಮ ಕೆಲಸ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಲು ಐದು ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎಂಎಲ್‌ಸಿ ಬಲ್ಕಿಷ್ ಬಾನು, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಜೇಂದ್ರ ಬಾಬು, ಜಿಪಂ ಉಪಕಾರ್ಯದರ್ಶಿ ಸುಜಾತಾ ಉಪಸ್ಥಿತರಿದ್ದರು.


ಪ್ರಯತ್ನದ ಕೊರತೆಗೆ ಔಷಧವಿಲ್ಲ

ಭೂ ಸುರಕ್ಷಾ ಯೋಜನೆ ಎರಡು ವರ್ಷದ ಹಿಂದೆಯೇ ಜಾರಿಗೆ ಬಂದಿದೆ. ಆದರೆ ಇದರ ಉದ್ದೇಶ ಇನ್ನೂ ಈಡೇರಿಲ್ಲ. ಇದರ ಸಮರ್ಪಕ ಜಾರಿಯಲ್ಲಿ ಸಿಬ್ಬಂದಿ ಶ್ರಮ ಕಾಣುತ್ತಿಲ್ಲ. ಪ್ರಯತ್ನದ ಕೊರತೆಗೆ ಔಷಧವಿಲ್ಲ ಎಂದು ಕೃಷ್ಣಬೈರೇಗೌಡ ಕಂದಾಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ರೆಕಾರ್ಡ್ ರೂಂನಿಂದ ನೀಡಿರುವ ದಾಖಲೆಗಳ ಅಂಕಿ ಅಂಶವನ್ನು ಗಮನಿಸಿದ ಸಚಿವರು, ಭದ್ರಾವತಿ ತಾಲೂಕಿನಲ್ಲಿ ಅತಿ ಕಡಿಮೆ ದಾಖಲೆಗಳಿಗೆ ಸಾರ್ವಜನಿಕರಿಂದ ಬೇಡಿಕೆ ಬಂದಿರುವುದಕ್ಕೆ ಕಾರಣವೇನು ಎಂದು ಅಚ್ಚರಿ ವ್ಯಕ್ತಪಡಿಸಿದರು. ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಆದರೆ ನೀವು ಹೇಳುತ್ತಿರುವುದು ಸತ್ಯ ಎಂದು ಒಪ್ಪುವುದಕ್ಕೆ ಅಂಕಿ ಅಂಶಗಳು ಪೂರಕವಾಗಿಲ್ಲ ಎಂದು ಬಿಸಿ ಮುಟ್ಟಿಸಿದರು. ಕಂದಾಯ ಗ್ರಾಮ, ದರಖಾಸ್ತು ಪೋಡಿ, ಫಾರ್ಮ್-53, ಅನುಬಂಧ ಮುಂತಾದವುಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವರು ಸಿಬ್ಬಂದಿಯ ಲೋಪವನ್ನು ಎತ್ತಿ ಹಿಡಿದರು. ಇದರಲ್ಲಿ ನಿಮಗೆ ಆಸಕ್ತಿಯಿಲ್ಲ. ಏಕೆಂದರೆ ಇದು ಬಡವರ ಕೆಲಸ ಎಂದು ತೀಕ್ಷ್ಣವಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net