ಬಿಲ್ಗುಣಿ ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರ | Drinking water

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬಿಲ್ಗುಣಿ ಗ್ರಾಮಸ್ಥರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಆಪ್ತ ಸಹಾಯಕ ಎಸ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಟಿ.ಜಿ.ನಾಗರಾಜ್, ರಾಜು, ದ್ರಾಕ್ಷಾಯಣಮ್ಮ, ಕೆ.ಎಸ್.ಪುಷ್ಪಾವತಿ, ಸುಮಾ, ವಿಮಲಾ, ಶಶಿಕಲಾ, ಸವಿತಾ, ರೇಣುಕಾಬಾಯಿ, ಸಾಕಮ್ಮ, ವಿನೋದಮ್ಮ, ಯಶೋಧಮ್ಮ, ವೀಣಾ ಇದ್ದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬಿಲ್ಗುಣಿ ಗ್ರಾಮಸ್ಥರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಆಪ್ತ ಸಹಾಯಕ ಎಸ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಟಿ.ಜಿ.ನಾಗರಾಜ್, ರಾಜು, ದ್ರಾಕ್ಷಾಯಣಮ್ಮ, ಕೆ.ಎಸ್.ಪುಷ್ಪಾವತಿ, ಸುಮಾ, ವಿಮಲಾ, ಶಶಿಕಲಾ, ಸವಿತಾ, ರೇಣುಕಾಬಾಯಿ, ಸಾಕಮ್ಮ, ವಿನೋದಮ್ಮ, ಯಶೋಧಮ್ಮ, ವೀಣಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂತರ್ಜಲ ಕುಸಿದು ಕಳೆದ 15 ದಿನಗಳಿಂದ ಕೈಕೊಟ್ಟ ಬೋರ್‌ವೆಲ್
  • 3 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ 1 ಟ್ರಮ್‌ನಷ್ಟು ನೀರು ಪೂರೈಕೆ
  • ಕೆರೆ ಕಟ್ಟೆಗಳು ಬರಿದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲ
ಶಿವಮೊಗ್ಗ: ಪ್ರಸಕ್ತ ವರ್ಷ ಬಿಸಿಲಿನ ತಾಪಕ್ಕೆ ಮಲೆನಾಡಿನ ಜನರೂ ಅಕ್ಷರಶಃ ನಲುಗುತ್ತಿದ್ದಾರೆ. ಮಳೆ ಇಲ್ಲದೆ ಕೆರೆ ಕಟ್ಟೆಗಳು ಬರಿದಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲದಂತಾಗಿದೆ. ಅದರಲ್ಲೂ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಲ್ಗುಣಿ ಗ್ರಾಮ(Bilguni village)ದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ.
ಕಳೆದ 15 ದಿನಗಳಿಂದ ಗ್ರಾಮದಲ್ಲಿ ತಮ್ಮಡಿಹಳ್ಳಿ ಗ್ರಾಪಂನಿಂದ ಕೊರೆಸಿದ್ದ ಬೋರ್‌ವೈಲ್(Borewel)ಕೈಕೊಟ್ಟಿದೆ. ಪರಿಣಾಮ ಎರಡು ದಿನಕ್ಕೊಮ್ಮೆ ಬಿಡುತ್ತಿದ್ದ ನೀರು ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಗ್ರಾಮಾಡಳಿತವೇ ಮನೆ ಮನೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಮೂರು ದಿನಕ್ಕೊಮ್ಮೆ ತಲಾ ಒಂದೊಂದು ಟ್ರಮ್‌ಗೆ ಸೀಮಿತವಾಗಿರುವುದು ನೀರಿನ ತತ್ವಾರ ಹೆಚ್ಚಾಗುವಂತೆ ಮಾಡಿದೆ.
ತಮ್ಮಡಿಹಳ್ಳಿ ಗ್ರಾಪಂನಿಂದ ಅಣತಿ ದೂರದಲ್ಲಿರುವ ಬಿಲ್ಗುಣಿ ಗ್ರಾಮದಲ್ಲಿ 150ಕ್ಕೂ ಅಧಿಕ ಮನೆಗಳಿದ್ದು, 600ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಬೋರ್‌ವೆಲ್‌ನಲ್ಲಿ ಅಂತರ್ಜಲ ಮಟ್ಟ(groundwater) ಕುಸಿದಿರುವ ಕಾರಣ ನೀರು ಪೂರೈಕೆಗೆ ಸಮಸ್ಯೆ ತಂದೊಡ್ಡಿದೆ. ಹಾಗಾಗಿ ಜನ-ಜಾನುವಾರುಗಳಿಗೆ ನೀರಿಲ್ಲದೆ ಅಕ್ಷರಶಃ ಪರದಾಟ ನಡೆಸುವಂತಾಗಿದೆ.
ಕಳೆದ ಎರಡು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವ ಬಗ್ಗೆ ಗ್ರಾಪಂ, ತಹಸೀಲ್ದಾರ್, ಜಿಪಂ, ಜಿಲ್ಲಾಡಳಿತ, ಗ್ರಾಮಾಂತರ ಶಾಸಕ(Rural MLA)ರಿಗೂ ಮನವಿ ಸಲ್ಲಿಸಿದ್ದೇವೆ. ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿಕೊಂಡಿದ್ದೇವೆ. ಆದರೆ ನೀರಿನ ಸಮಸ್ಯೆಗೆ ಮುಕ್ತಿ ಮಾತ್ರ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ತಹಸೀಲ್ದಾರ್, ಜಿಪಂ ಸಂಸದರ ಕಚೇರಿಗೆ ಮನವಿ

ಬಿಲ್ಗುಣಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಹೊಸದಾಗಿ ಬೋರ್‌ವೆಲ್ ಕೊರೆಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಶಿವಮೊಗ್ಗ ತಹಸೀಲ್ದಾರ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭಾ ಸದಸ್ಯರ ಕಚೇರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಬೋರೆವೆಲ್ ಕೊರೆಸಿದ್ದು, ಆ ನೀರನ್ನು ಉಪಯೋಗಿಸುತ್ತಿದ್ದೇವು. ಆದರೆ 15 ದಿನಗಳಿಂದ ಅಂತರ್ಜಲಮಟ್ಟ ಕುಸಿದಿದ್ದು, ಬೋರ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ. ಇದರಿಂದ ಗ್ರಾಮದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತಾತ್ವರವಾಗಿದೆ. ಹಾಗಾಗಿ ಗ್ರಾಮಕ್ಕೆ ಹೊಸದಾಗಿ ಬೋರ್‌ವೆಲ್ ಅನ್ನು ತುರ್ತಾಗಿ ಕೊರೆಸುವಂತೆ ಒತ್ತಾಯಿಸಿದರು. 
ಅಲ್ಲಿಯವರೆಗೂ ಗ್ರಾಮಕ್ಕೆ ಪ್ರತಿದಿನ 10 ಟ್ಯಾಂಕರ್ ಕುಡಿಯುವ ನೀರು ಸರಬರಾಜು ಮಾಡುವಂತೆ ವಿನಂತಿಸಿದರು. ಇಲ್ಲವಾದಲ್ಲಿ ಜಿಪಂ ಮತ್ತು ತಹಸೀಲ್ದಾರ್ ಮುಂದೆ ಗ್ರಾಮಸ್ಥರು ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಟಿ.ಜಿ.ನಾಗರಾಜ್, ಗ್ರಾಮಸ್ಥರಾದ ರಾಜು, ದ್ರಾಕ್ಷಾಯಣಮ್ಮ, ಕೆ.ಎಸ್.ಪುಷ್ಪಾವತಿ, ಸುಮಾ, ವಿಮಲಾ, ಶಶಿಕಲಾ, ಸವಿತಾ, ರೇಣುಕಾಬಾಯಿ, ಸಾಕಮ್ಮ, ವಿನೋದಮ್ಮ, ಯಶೋಧಮ್ಮ, ವೀಣಾ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net