ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟ | Special Comprehensive Revision

ಜಿಲ್ಲಾ ಚುನಾವಣಾಧಿಕಾರಿ  ಪ್ರಭುಲಿಂಗ ಕವಳಿಕಟ್ಟಿ.
ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ.
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ಕು ದಿನಗಳಲ್ಲಿ ಶೇ.37.85ರಷ್ಟು ಅರ್ಜಿಗಳ ವಿತರಣೆ
  • ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ
  • ಜಿಲ್ಲಾ ಚುನಾವಣಾ ಅಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿಕೆ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಶೇ.37.85ರಷ್ಟು ಅರ್ಜಿಗಳ ವಿತರಣೆ ಪೂರ್ಣಗೊಂಡಿದ್ದು, ಜುಲೈ 29ರವರೆಗೂ ಅರ್ಜಿಗಳ ಸ್ವೀಕಾರ ಪ್ರಕ್ರಿಯೆ ಮುಂದುವರಿಯಲಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟ ಆಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ(District Election Officer) ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(Special Comprehensive Revision) ಜಿಲ್ಲೆಯಲ್ಲಿಯೂ ಪ್ರಗತಿಯಲ್ಲಿದೆ. ಆರಂಭದಲ್ಲಿ ಅರ್ಜಿಗಳ ವಿತರಣೆಗೆ ಒತ್ತು ನೀಡಲಾಗಿದೆ. ಕರಡು ಪಟ್ಟಿಯಲ್ಲಿ ನ್ಯೂನತೆಗಳಿದ್ದರೆ ಸೆಪ್ಟೆಂಬರ್ 4ರವರೆಗೂ ದೂರು ಸ್ವೀಕಾರ ಮಾಡಲಾಗುತ್ತದೆ. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ ಆಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1,793 ಚುನಾವಣಾ ಮತಗಟ್ಟೆ(Election booth)ಗಳಿದ್ದು, ಅಷ್ಟೇ ಸಂಖ್ಯೆಯ ಬೂತ್‌ಮಟ್ಟದ ಅಧಿಕಾರಿ(Booth level officer)(ಬಿಎಲ್‌ಒ)ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜೂ.29ರಿಂದ ಮತದಾರರಿಗೆ ಅರ್ಜಿ ವಿತರಣೆ ಕಾರ್ಯ ಆರಂಭವಾಗಿದೆ. ಅರ್ಜಿ ವಿತರಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಅರ್ಜಿ ವಿತರಣೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 15,19,459 ಮತದಾರರಿದ್ದು, ಇದುವರೆಗೆ 5,75,101 ಅರ್ಜಿ ವಿತರಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ(Shivamogga Rural Assembly Constituency)ದಲ್ಲಿ ಅತಿ ಹೆಚ್ಚು 1,11,701 ಅರ್ಜಿ ವಿತರಣೆ ಮಾಡಲಾಗಿದೆ. ಇನ್ನುಳಿದಂತೆ ಭದ್ರಾವತಿಯಲ್ಲಿ 83,672, ಶಿವಮೊಗ್ಗ ನಗರದಲ್ಲಿ 84,462, ತೀರ್ಥಹಳ್ಳಿಯಲ್ಲಿ 67,569, ಶಿಕಾರಿಪುರದಲ್ಲಿ 79,346, ಸೊರಬದಲ್ಲಿ 78,221 ಹಾಗೂ ಸಾಗರದಲ್ಲಿ 70,130 ಅರ್ಜಿ ವಿತರಣೆ ಮಾಡಲಾಗಿದೆ. ಕೆಲವೆಡೆ ಬಿಎಲ್‌ಒಗಳು ಅರ್ಜಿ ಸ್ವೀಕಾರ ಮಾಡಿ ಆನ್‌ಲೈನ್‌ಗೆ ಭರ್ತಿ ಕೂಡ ಮಾಡಿದ್ದಾರೆ ಎಂದರು. ಎಡಿಸಿ ವಿ.ಅಭಿಷೇಕ್, ಚುನಾವಣಾ ಶಾಖೆ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.

ಮೂರು ಬಾರಿ ಮನೆ ಬಾಗಿಲಿಗೆ 

ಮನೆ ಬಾಗಿಲು ಹಾಕಿದ್ದರೂ ಬಿಎಲ್‌ಒಗಳು ಜು.29ರೊಳಗೆ ಮೂರು ಬಾರಿ ಭೇಟಿ ನೀಡುವರು. ಆಗಲೂ ಆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ಅಂತಹ ಮನೆಗೆ ಬಿಎಲ್‌ಒ(BLO) ಹೆಸರು, ಮೊಬೈಲ್ ಸಂಖ್ಯೆ ಇರುವ ನೇರಳೆ ಬಣ್ಣದ ಪತ್ರ ಅಂಟಿಸುವರು. ಅಕ್ಕಪಕ್ಕದವರು ಕೂಡ ಆ ಮನೆ ಮಾಲೀಕರಿಗೆ ಮಾಹಿತಿ ನೀಡಬಹುದು. ಮನೆ ಬಾಗಿಲು ಹಾಕಿದ್ದರೂ ಅಂತಹ ಮನೆಗೂ ಅರ್ಜಿ ಹಾಕಲಾಗಿರುತ್ತದೆ. ಅರ್ಜಿ ಭರ್ತಿ ಮಾಡಿ ಕೊಡದೇ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಪ್ರಭುಲಿಂಗ ಕವಳಕಟ್ಟಿ ಸ್ಪಷ್ಟಪಡಿಸಿದರು. ಯಾವುದೇ ಬಿಎಲ್‌ಒ ಮನೆಗೆ ಭೇಟಿ ಕೊಡದೇ ತಾವು ಇರುವಲ್ಲಿಗೇ ಬಂದು ಅರ್ಜಿ ಸಲ್ಲಿಸಿ ಎಂದು ಹೇಳಲು ಅವಕಾಶವಿಲ್ಲ. ತೀರ್ಥಹಳ್ಳಿಯಲ್ಲಿ ವಾಟ್ಸ್‌ಆ್ಯಪ್ ಮೂಲಕ ಒಂದು ಕಡೆಗೆ ಬಂದು ಅರ್ಜಿ ಸ್ವೀಕರಿಸಿ ಸಲ್ಲಿಸಲು ಹೇಳಿರುವುದು ಮಾಧ್ಯಮಗಳ ಮೂಲಕ ಕಂಡುಬಂದಿದೆ. ಆದರೆ ಅದು ಅಧಿಕೃತವಲ್ಲ. ಈ ಬಗ್ಗೆ ತಹಸೀಲ್ದಾರ್ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.
"

ಅರ್ಜಿ ವಿತರಣೆಗೆ ಬಿಎಲ್‌ಒಗಳ ಜತೆಗೆ ಬಿಎಲ್‌ಎ(ಬೂತ್‌ಮಟ್ಟದ ಏಜೆಂಟ್) ಕೂಡ ಭೇಟಿ ಕೊಡಬಹುದು. ಅರ್ಜಿದಾರ ಬೇಕಿದ್ದರೆ ಬಿಎಲ್‌ಎಗಳ ಬಳಿಯೂ ಅರ್ಜಿಗಳನ್ನು ಭರ್ತಿ ಮಾಡಿ ಕೊಡಬಹುದು. ಆದರೆ ಬಿಎಲ್‌ಒ ಜತೆಗೆ ಬಿಎಲ್‌ಎಗಳು ಬಂದಾಗ ಯಾವುದೇ ಕರಪತ್ರ ಸೇರಿ ಪರಿಷ್ಕರಣೆಗೆ ಸಂಬಂಧಪಟ್ಟ ಅಥವಾ ಸಂಬಂಧಪಡದ ಯಾವುದೇ ಪ್ರಚಾರ ಮಾಡುವಂತಿಲ್ಲ.

— ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಚುನಾವಣಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net