ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಬೇಡಿ

ಬಗರಹುಕುಂ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಸೊರಬ ತಾಲೂಕು ರೈತ ಸಂಘದ ಪದಾಧಿಕಾರಿಗಳು, ರೈತರು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ಮಂಜುನಾಥ್, ಸುಭಾಷ್, ಎನ್.ಮಂಜುನಾಥ ಗೌಡ ಇತರರಿದ್ದರು.
ಬಗರಹುಕುಂ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಸೊರಬ ತಾಲೂಕು ರೈತ ಸಂಘದ ಪದಾಧಿಕಾರಿಗಳು, ರೈತರು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ಮಂಜುನಾಥ್, ಸುಭಾಷ್, ಎನ್.ಮಂಜುನಾಥ ಗೌಡ ಇತರರಿದ್ದರು.
Published on
ಸೊರಬ: ರೈತರ ಜತೆ ನಿಲ್ಲುತ್ತೇವೆ ಎಂದು ಚುನಾವಣೆ ಸಂದರ್ಭ ಮಾತುಕೊಟ್ಟಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ವರಸೆ ಬದಲಿಸಿದೆ. ಜೀವನೋಪಾಯಕ್ಕಾಗಿ ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಉಳುಮೆ ಮಾಡಿದ ರೈತರನ್ನು ಒಕ್ಕಲೆಬ್ಬಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬಡ ರೈತರು ಜೀವನೋಪಾಯಕ್ಕಾಗಿ ಎರಡು ಎಕರೆ ಹೊಂದಿರುವ ಅರಣ್ಯ ಭೂಮಿಯನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಸರ್ಕಾರಕ್ಕೆ ನೂರಾರು ಎಕರೆ ಅರಣ್ಯ ಭೂಮಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಏಕೆ ಗಮನಕ್ಕೆ ಬರುತ್ತಿಲ್ಲ. ರಾಜ್ಯದ ವಿವಿಧೆಡೆ ಶ್ರೀಮಂತರು ಅರಣ್ಯ ಭೂಮಿ ಕಬಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿಲ್ಲವೇ? ನಿರಾಶ್ರಿತ ಕುಟುಂಬಗಳು ಹಾಗೂ ಅರಣ್ಯವಾಸಿಗಳು ಹೊಟ್ಟೆಪಾಡಿಗಾಗಿ ಹೊಂದಿರುವ ಅರಣ್ಯ ಭೂಮಿ ಒತ್ತವರಿ ತೆರವನ್ನು ನಿಲ್ಲಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಬೆಳೆಗಳಿಗೆ ಯೋಗ್ಯ ಬೆಲೆ ನೀಡುವಂತೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಪಾಲನೆ ಮಾಡುತ್ತಿಲ್ಲ. ರೈತರು ಅತಿವೃಷ್ಟಿ, ಅನಾವೃಷ್ಟಿಯಂತಹ ಗಂಭೀರ ಸಮಸ್ಯೆಗಳ ಜತೆಗೆ ವೈಜ್ಞಾನಿಕ ಬೆಲೆ ದೊರೆಯದೆ ನಷ್ಟ ಅನುಭವಿಸುತ್ತಿದ್ದಾರೆ. ಮುಖ್ಯ ಮಂತ್ರಿಗಳು, ಮಂತ್ರಿಗಳು, ಸಂಸದರು ಈ ಬಗ್ಗೆ ಗಮನಹರಿಸಿ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬೆಳೆ ವಿಮೆ ಪರಿಹಾರ ಸೇರಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಾಸನ ಸೇರಿ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ 650 ಮರದ ಕೈಗಾರಿಕೆಗಳನ್ನು ನಡೆಸಲಾಗುತ್ತಿದೆ. ಪ್ರತಿದಿನ ಈ ಕೈಗಾರಿಕೆಗಳಿಗೆ  ಕನಿಷ್ಠ ಒಂದು ಮರವನ್ನು ಪೂರೈಕೆ ಮಾಡಿದರೆ 650 ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸದ ಸರ್ಕಾರ, ದೇಶಕ್ಕೆ ಅನ್ನ ಬೆಳೆಯುತ್ತಿರುವ ರೈತರ ಮೇಲೆ ಪ್ರಭುತ್ವದ ದರ್ಪ ತೋರಿಸುತ್ತಿದೆ ಎಂದ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಶ್ರೀ ರಂಗನಾಥ ದೇವಸ್ಥಾನದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ರೈತರು ಮೆರವಣಿಗೆ ನಡೆಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಸುಭಾಷ್, ರಾಜ್ಯ ಕಾರ್ಯದರ್ಶಿ ಎನ್.ಮಂಜುನಾಥ ಗೌಡ, ಸಂಚಾಲಕ ಉಮೇಶ್ ಪಾಟೀಲ್, ಮಾಲತೇಶ್ ಕೊಡಕಣಿ, ಡಾ. ಜ್ಞಾನೇಶ್, ಮೇಘರಾಜ್ ಗೌಡ, ಬಸವರಾಜ್, ಹುಚ್ಚಪ್ಪ, ಯೋಗೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net