ನದಿಗಳನ್ನು ಕಲುಷಿತಗೊಳಿಸದಿರಿ

ಸೊರಬದ ಇತಿಹಾಸ ಪ್ರಸಿದ್ಧ ಬಂಕಸಾಣದ ವರದಾ ಹಾಗೂ ದಂಡಾವತಿ ನದಿ ಸಂಗಮ ಕ್ಷೇತ್ರದಲ್ಲಿ ಆಯೋಜಿಸಿದ್ದ ವರದಾರತಿ.
ಸೊರಬದ ಇತಿಹಾಸ ಪ್ರಸಿದ್ಧ ಬಂಕಸಾಣದ ವರದಾ ಹಾಗೂ ದಂಡಾವತಿ ನದಿ ಸಂಗಮ ಕ್ಷೇತ್ರದಲ್ಲಿ ಆಯೋಜಿಸಿದ್ದ ವರದಾರತಿ.
Published on
ಸೊರಬ: ಪರಿಸರ ರಕ್ಷಿಸಿಕೊಳ್ಳುವುದು ಇಂದಿನ ಅಗತ್ಯ. ಅದಕ್ಕಾಗಿಯೇ ವರದಾರತಿ ಕಾರ್ಯಕ್ರಮ ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಬಂಕಸಾಣದ ವರದಾ ಹಾಗೂ ದಂಡಾವತಿ ನದಿ ಸಂಗಮ ಕ್ಷೇತ್ರದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ಜಡೆಯಿಂದ ಆಯೋಜಿಸಿದ್ದ ವರದಾರತಿ ಕಾರ್ಯಕ್ರಮದಲ್ಲಿ ಮಾತನಾಡಿ, ವರದೆಗೆ ಆರತಿ ಅಗತ್ಯವಿಲ್ಲ. ಆರತಿ ಮಾಡಿದರೆ ವರದೆಗೆ ಸಂತೋಷ ಆಗುವುದಿಲ್ಲ. ಆರತಿ ಮಾಡದಿದ್ದರೆ ವರದೆಗೆ ದುಃಖ ಆಗುವುದಿಲ್ಲ. ಆದರೆ ವರದೆಯನ್ನು ಕಲುಷಿತಗೊಳಿಸಿದರೆ ದುಃಖವಾಗುತ್ತದೆ. ನದಿಗಳನ್ನು ನಾಶಗೊಳಿಸಿದರೆ ಸಂಸ್ಕೃತಿ ನಾಶಪಡಿಸಿದಂತೆ ಎಂದು ತಿಳಿಸಿದರು.
ಭೂಮಂಡಲವನ್ನು ಪ್ಲಾಸ್ಟಿಕ್‌ಮಯ ಮಾಡಿ ವಾತಾವರಣ ಕಲುಷಿತಗೊಳಿಸಲಾಗುತ್ತಿದೆ. ನಮ್ಮ ನಿತ್ಯ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ನೀರು, ನೆಲವನ್ನು ರಾಸಾಯನಿಕಗಳಿಂದ ರಕ್ಷಿಸಿಕೊಳ್ಳಬೇಕು ಎಂದರು.
ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಸಂಸ್ಥಾನ ಮಠದ ಶ್ರೀ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ಸ್ವಸ್ತಿಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಹಿರೇಮಾಗಡಿಯ ಸ್ವಾದಿ ಚನ್ನಬಸವ ಸ್ವಾಮೀಜಿ ಉಪಸ್ಥಿತರಿದ್ದರು.
ತಾಳಗುಪ್ಪ ಅರಮನಿ ಮಠದ ಸಿದ್ಧಲಿಂಗ ಶಾಸ್ತ್ರಿ, ಪಂಚಾಕ್ಷರಿ ಶಾಸ್ತ್ರಿ, ಶಿವಕುಮಾರ ಶಾಸ್ತ್ರಿ ಸಂಗಡಿಗರು ಪೂಜಾ ಕಾರ್ಯ ನಡೆಸಿದರು. ದುಗ್ಲಿಯ ಮಾಹೇಶ್ವರಿ ಭಜನಾ ಸಂಘದಿಂದ ಭಜನೆ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net