ಸಾಗರ: ಹೊರರಾಜ್ಯಗಳಿಂದ ಬರುವ ಐಎಎಸ್, ಐಪಿಎಸ್ ಅಧಿಕಾರಿಗಳು ಕನ್ನಡ ಭಾಷೆಯನ್ನು ಕಲಿತು ಚೆನ್ನಾಗಿ ಮಾತನಾಡುತ್ತಾರೆ. ಆದರೆ ಕನ್ನಡಿಗರೇ ಆಗಿರುವ ಅಧಿಕಾರಿಗಳು ಕನ್ನಡ ಮಾತನಾಡಲು ಮೀನಮೇಷ ಎಣಿಸುತ್ತಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಬೇಸರ ವ್ಯಕ್ತಪಡಿಸಿದರು.
ಸಾಗರದ ಸರ್ಕಾರಿ ನೌಕರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ನೌಕರರ ಸಮಾವೇಶ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾದರೆ ರಾಜ್ಯದಲ್ಲಿ ಕನ್ನಡ ಭಾಷೆ ವಿಜೃಂಭಿಸುತ್ತದೆ. ಕನ್ನಡಿಗರು ಕನ್ನಡವನ್ನು ಗರ್ವದಿಂದ ಬಳಸುವ ಜತೆಗೆ ಉಳಿಸಬೇಕು. ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ನಡೆದರೆ ಸರ್ಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸಲು ಸಾಧ್ಯ ಎಂದು ಹೇಳಿದರು.
ತಾಲೂಕಿನ ಅಧಿಕಾರಿಗಳು, ನೌಕರರು ಜನರಿಗೆ ಉತ್ತಮ ಸೇವೆ ಕೊಡಿ. ಜನಪರ ಕೆಲಸ ಮಾಡಬೇಕೆಂಬ ಹಂಬಲದಿಂದ ರಾಜಕಾರಣಕ್ಕೆ ಬರುತ್ತೇವೆ. ಜನರಿಗೆ ಉತ್ತಮ ಕೆಲಸ ಮಾಡಿಕೊಡಬೇಕಾದರೆ ನಿಮ್ಮ ಸಹಕಾರ ಅಗತ್ಯ. ಹಳೇ ಪಿಂಚಣಿ ಯೋಜನೆ ಬಗ್ಗೆ ಸರ್ಕಾರ ಸಹಮತ ಹೊಂದಿದೆ. ನೌಕರರು ಉತ್ತಮ ಕೆಲಸ ಮಾಡುವ ಮೂಲಕ ವೃತ್ತಿ ಘನತೆ ಎತ್ತಿ ಹಿಡಿಯಬೇಕು ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರು ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಭಾಷೆ ಬಳಸುವಾಗ ಗೊಂದಲ ಆಗಬಹುದು. ಆದರೆ ಕನ್ನಡಾಭಿಮಾನ ಇದ್ದೇ ಇರುತ್ತದೆ. ಕೇಂದ್ರ ಮಾದರಿ ವೇತನ ಮತ್ತಿತರ ಬೇಡಿಕೆಗಳ ಬಗ್ಗೆ ಸಂಘ ಹೋರಾಟ ರೂಪಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಒತ್ತಡ ತಂದು ಋತುಚಕ್ರ ರಜೆಯನ್ನು ಕೊಡಿಸಲಾಗಿದೆ ಎಂದು ತಿಳಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಸೇವೆಯಲ್ಲಿ ನೌಕರರ ಪಾತ್ರ ಕುರಿತು ಡಾ. ಬಿ.ಸಿ.ದಾದಾಪೀರ್ ಮಾತನಾಡಿದರು, ಸಂಘದ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್, ಎಸ್.ಬಸವರಾಜ್, ಮಧುಕೇಶವ, ನೇತ್ರಾವತಿ, ಅಣ್ಣಪ್ಪ, ಸುರೇಶ್ ಜಂಬಾನಿ ಇತರರಿದ್ದರು.