ಶಿವಮೊಗ್ಗ: ನಗರದ ಸಿಮ್ಸ್ (ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ), ಎಪಿಐ (ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯಾ) ಸಹ್ಯಾದ್ರಿ ಶಾಖೆಯಿಂದ ಮೇ 8ರಿಂದ 10ರವರೆಗೆ ಸಿಮ್ಸ್‌ನಲ್ಲಿ ರಾಜ್ಯಮಟ್ಟ (state level) ದ ತಜ್ಞ ವೈದ್ಯ (doctor) ರ ಸಮ್ಮೇಳನ ಕಾಪಿಕಾನ್-2026 ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ (secretary) ಡಾ. ಬಿ.ಸಿ.ಪೃಥ್ವಿ ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗಗಳ ಎರಡು ಸಾವಿರಕ್ಕೂ ಹೆಚ್ಚು ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಉಪನ್ಯಾಸ-ಚರ್ಚೆ, ಕಾರ್ಯಗಾರಗಳು ನಡೆಯಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಎಸ್.ಬಿ.ಹೆಗಡೆ ಮಾತನಾಡಿ, 2004ರಲ್ಲಿ ಶಿವಮೊಗ್ಗದಲ್ಲಿ ಇಂತಹ ಸಮ್ಮೇಳನ ನಡೆದಿತ್ತು. 22 ವರ್ಷಗಳ ನಂತರ ಮತ್ತೊಮ್ಮೆ ನಮಗೆ ಆತಿಥ್ಯ ದೊರೆತಿದೆ. ಸಮ್ಮೇಳನದಲ್ಲಿ ಸಾವಿರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಹೈದರಾಬಾದ್‌ನ ಡಾ. ನಾಗೇಶ್ವರ ರೆಡ್ಡಿ, ದೆಹಲಿಯ ಡಾ. ರಮಣಪುರಿ, ಚೆನ್ನೈನ ಡಾ. ಸುರೇಶ್‌ಕುಮಾರ್, ದುಬೈನ ಡಾ. ಧನರಾಜ್ ಸೇರಿ ನುರಿತ ವೈದ್ಯರು ಉಪನ್ಯಾಸ ನೀಡುವರು. ಖ್ಯಾತ ಹೃದ್ರೋಗ ತಜ್ಞ ವೈದ್ಯ ಡಾ. ಸಿ.ಎನ್ ಮಂಜುನಾಥ್ ಮೇ 8ರ ಸಂಜೆ 5ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಡಾ. ಬಿ.ಮಹಾಲಿಂಗಪ್ಪ, ಡಾ. ಜಿ.ನರಸಿಂಹಲು, ಡಾ. ಜ್ಯೋತಿರ್ಮಯಿ ಪಾಲ್ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.
ಪ್ರಮುಖರಾದ ಡಾ. ಬಿ.ಆರ್.ಮಹೇಶಮೂರ್ತಿ, ಡಾ. ಶ್ರೀಕಾಂತ್ ಎನ್.ಹೆಗಡೆ, ಡಾ. ಕೆ.ಆರ್.ರವೀಶ್, ಡಾ. ಎಸ್.ಪರಮೇಶ್ವರ್, ಡಾ. ಸಿ.ಎಲ್.ಅರವಿಂದ್, ಡಾ. ಪ್ರವೀಣ್ ದೇವರಬಾವಿ, ಡಾ. ರತ್ನಾಕರ್, ಡಾ. ಪಿ.ಕೆ.ಪೈ, ಡಾ. ಡಿ.ಜಿ.ಶಿವಕುಮಾರ್, ಡಾ. ಈಶ್ವರಪ್ಪ, ಡಾ. ರಮ್ಯಾ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.
ಮೂರು ವಿಷಯಕ್ಕೆ ಪ್ರಸ್ತಾವನೆ
ಸಿಮ್ಸ್‌ನಲ್ಲಿ ಪ್ರಸ್ತುತ 22 ಸ್ನಾತಕೋತ್ತರ ವಿಷಯಗಳ ಕಲಿಕೆಗೆ ಅವಕಾಶವಿದೆ. ಇನ್ನೂ ಮೂರು ವಿಷಯಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲಿ 102 ಸ್ನಾತಕೋತ್ತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 150 ವೈದ್ಯರು ಬೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಸ್ಥೆಗೆ ಒಂದು ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇತ್ತು. ಸಚಿವ ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಡನೆ ಸಮಾಲೋಚಿಸಿದ ಪರಿಣಾಮ ಇಂದು ಸಭಾಂಗಣ ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ತೆರೆದುಕೊಂಡಿದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದರು.