ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆಯದಿರಿ I doctors treatment

ವಿ.ಅಭಿಷೇಕ್ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ನಡೆಸಿದರು. ಡಾ.ನಟರಾಜ್, ಸುಜಾತಾ, ಡಾ.ನಾಗರಾಜ ನಾಯ್ಕ, ಡಾ.ಮಲ್ಲಪ್ಪ, ಡಾ.ಗುಡದಪ್ಪ ಕಸಬಿ ಇದ್ದರು.
ವಿ.ಅಭಿಷೇಕ್ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ನಡೆಸಿದರು. ಡಾ.ನಟರಾಜ್, ಸುಜಾತಾ, ಡಾ.ನಾಗರಾಜ ನಾಯ್ಕ, ಡಾ.ಮಲ್ಲಪ್ಪ, ಡಾ.ಗುಡದಪ್ಪ ಕಸಬಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾವು ಕಡಿತದ ಬಗ್ಗೆ ಎಚ್ಚರವಿರಲಿ
  • ಅಧಿಕಾರಿಗಳೊಂದಿಗೆ ಎಡಿಸಿ ಮಹತ್ವದ ಸಭೆ
ಶಿವಮೊಗ್ಗ: ಹಾವು (snake) ಕಡಿತಕ್ಕೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬಾರದು. ಹಾವು ಕಡಿತ(bite) ಕ್ಕೆ ಚಿಕಿತ್ಸೆ (treatment) ನೀಡುವ ನಾಟಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಎಚ್ಚರಿಸಿದರು.
ಸೋಮವಾರ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಾವು ಕಡಿತಕ್ಕೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು ಇರಬೇಕು. ಸಾರ್ವಜನಿಕರು ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಾಲಾ ಆವರಣದಲ್ಲಿ ಅನಗತ್ಯ ಗಿಡಗಂಟಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ ನಾಯ್ಕ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 226 ಹಾವು ಕಡಿತದ ಪ್ರಕರಣಗಳು ದಾಖಲಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಸಾಗರ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದರು.
ಈ ವರ್ಷ ಕೆಎಫ್‌ಡಿಯ 123 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಐವರು ಮೃತಪಟ್ಟಿದ್ದಾರೆ. 147 ಮಂಗಗಳು ಮೃತಪಟ್ಟಿದ್ದು, ಇದರಲ್ಲಿ 34 ಮಂಗಗಳ ಸಂಪೂರ್ಣ ಪರೀಕ್ಷೆ ನಡೆಸಲಾಗಿದೆ. ಅವುಗಳಲ್ಲಿ ವೈರಾಣು ಕಂಡುಬಂದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಈ ವರ್ಷ 8 ಸಾವಿರ ನಾಯಿ ಕಡಿತ
ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಲ್ಲಿ 2,254 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಈ ವರ್ಷದಲ್ಲಿ ಒಟ್ಟು 8,140 ನಾಯಿ ಕಡಿತ ಪ್ರಕರಣ ದಾಖಲಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿ.ಅಭಿಷೇಕ್ ಹೇಳಿದರು.
ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪರಿಣಾಮಕಾರಿಯಾಗಬೇಕು. ಹೋಟೆಲ್, ಕಲ್ಯಾಣ ಮಂದಿರ, ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಪದಾರ್ಥ ಹಾಕಬಾರದು ಎಂದು ತಿಳಿಸಿದರು.
"

ಜಿಲ್ಲೆಯ 14ರಿಂದ 15 ವರ್ಷದೊಳಗಿನ ಎಲ್ಲ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆ ಹಾಕಿಸಬೇಕು. ವಿದ್ಯಾರ್ಥಿನಿಯರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆದುಕೊಳ್ಳಬೇಕು. ಆ ಮೂಲಕ ಗರ್ಭಕಂಠ ಕ್ಯಾನ್ಸರ್‌ನಿಂದ ಮುಕ್ತವಾಗಬೇಕು.

— ಸುಜಾತಾ, ಜಿಪಂ ಉಪ ಕಾರ್ಯದರ್ಶಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net