ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ ಮರಳು ಕ್ವಾರಿಯಿಂದ ನಿಯಮ ಉಲ್ಲಂಸಿ ಮರಳು ಸಾಗಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿದರು. ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್ ಇತರರಿದ್ದರು.
ತೀರ್ಥಹಳ್ಳಿ: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ತರುವ ತಾಲೂಕಿನ ದಬ್ಬಣಗದ್ದೆ ಮತ್ತು ಮುಂಡಳ್ಳಿ ಮರಳು ಕ್ವಾರಿಯಿಂದ ಪರ್ಮಿಟ್ ಇಲ್ಲದೆ ನೂರಾರು ಲೋಡ್ ಅಕ್ರಮ ಮರಳು ಸಾಗಣೆಯಾಗಿದ್ದು, ಜಿಲ್ಲಾಡಳಿತ ನಿದ್ರಿಸುತ್ತದೆ. ಇದಕ್ಕೆ ಬೆಂಬಲವಾಗಿ ನಿಂತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಮುಂಡಳ್ಳಿ ಮರಳು ಕ್ವಾರಿಗೆ ಸೋಮವಾರ ಭೇಟಿ ನೀಡಿದ ಶಾಸಕರು ಮರಳು ಸ್ಟಾಕ್ ಯಾರ್ಡ್ನಲ್ಲಿ ಯಾವುದೇ ದಾಖಲೆಗಳು ಕ್ರಮವಾಗಿ ಇಲ್ಲದಿರುವುದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಭೂ ಮತ್ತು ಗಣಿ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಕ್ರಮಗಳಿಗೆ ಬೆಂಬಲವಾಗಿ ನಿಂತಿರುವ ಅಧಿಕಾರಿಗಳ ಸೇವೆ ಅಗತ್ಯವಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಸಮರ್ಥವಾಗಿ ನಿರ್ವಹಿಸಲಾಗದ ಅಧಿಕಾರಿಗಳು ಇಲ್ಲಿಂದ ಹೊರಟು ಹೋಗುವುದೇ ಸೂಕ್ತ ಎಂದರು.
ರಾಜ್ಯ ಭೂ ಮತ್ತು ಗಣಿ ಇಲಾಖೆ ಹಿರಿಯ ನಿರ್ದೆಶಕರಿಗೆ ದೂರವಾಣಿ ಕರೆಯಲ್ಲಿ ಮಾತನಾಡಿ, ಮೇ 6ರಂದು ದಬ್ಬಣಗದ್ದೆ ಕ್ವಾರಿಯಿಂದ 200 ಲೋಡ್ ಮರಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಮುಂಡಳ್ಳಿ ಕ್ವಾರಿಯಿಂದ ಸಾಗಿಸುತ್ತಿರುವ ಮರಳಿಗೆ ಜಿಎಸ್ಟಿ ಕೂಡ ಪಾವತಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರ ಕಡೆಯಿಂದ ಸರಿಯಾದ ಮಾಹಿತಿ ಇಲ್ಲ. ಮರಳು ಲೂಟಿ ಹೊಡೆಯುವುದರಲ್ಲಿ ತಹಸೀಲ್ದಾರ್, ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು ಶಾಮೀಲಾಗಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ನಿಯಮದಂತೆ ನಿರ್ವಹಣೆ ಮಾಡಲು ಅಸಾಧ್ಯವಾದಲ್ಲಿ ಲೀಸ್ ಸರಂಡರ್ ಮಾಡಿ ಎಂದರಲ್ಲದೆ ನಿಯಮಬಾಹಿರವಾಗಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಇದರ ಹಿಂದೆ ಕೆಲ ರಾಜಕಾರಣಿಗಳ ಕುತಂತ್ರವಿದೆ. ಸಹಕಾರ ನೀಡುತ್ತಿರುವವರ ಮುಖವಾಡ ಕಳಚಬೇಕು ಎಂದು ಹೇಳಿದರು.
ಹಣ ಕಟ್ಟಿದ ಬಗ್ಗೆ ನೀಡುವ ರಸೀದಿಯಲ್ಲಿ ಜಿಎಸ್ಟಿ ತೆರಿಗೆ ಕಾಲಂ ಖಾಲಿ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಉದ್ದೇಶದಿಂದಲೇ ಅಧಿಕಾರಿಗಳು ಇಲ್ಲದ ನೆಪ ಹೇಳುತ್ತಿದ್ದೀರಿ. ಸ್ಟಾಕ್ ಯಾರ್ಡ್ನಲ್ಲಿ ಸಿಸಿ ಕ್ಯಾಮರಾ ಇಲ್ಲ. ಅಧಿಕಾರಿಗಳೂ ಕೂರುತ್ತಿಲ್ಲ. ವ್ಯವಸ್ಥಿತವಾಗಿ ದಂಧೆ ನಡೆಯುತ್ತಿದೆ ಎಂದರು.
ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರವಿಣ್, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್, ಕವಿರಾಜ್ ಬೇಗುವಳ್ಳಿ, ಮಧುರಾಜ್ ಹೆಗ್ಡೆ ಇದ್ದರು.
ಬಿಡ್ನಲ್ಲಿ ಅಲಾಟ್ ಆದ ಮರಳು ಸಾಗಿಸದಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸಬೇಕು. ದಬ್ಬಣಗದ್ದೆ ಮರಳು ಕ್ವಾರಿಯಲ್ಲಿ ಕಳೆದ ವರ್ಷ ಅಲಾಟ್ ಆಗಿದ್ದ 28,000 ಟನ್ ಬದಲಿಗೆ 57 ಸಾವಿರ ಟನ್ ಮರಳು ಸಾಗಿಸಲಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ 1.08 ಕೋಟಿ ರೂ. ದಂಡ ಹಾಕಲಾಗಿದೆ. ಆದರೆ ಹಣ ಇನ್ನೂ ಪಾವತಿಯಾಗಿಲ್ಲ. ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುವ ಬದಲಿಗೆ ಯಾಕೆ ಅವಕಾಶ ನೀಡಿದ್ದೀರಿ?