ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಪ್ರಾಧಿಕಾರದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ(ಸಿಎಂಡಿ) ಡಾ. ಅಶೋಕ್‌ಕುಮಾರ್ ಪಾಂಡ ಭೇಟಿ ನೀಡಿ ಕಾರ್ಖಾನೆ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿದರು.
ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸ್ವಾಗತಿಸಿದ ಕಾರ್ಖಾನೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್, ಅಧಿಕಾರಿಗಳು ವಿಐಎಸ್‌ಎಲ್ ಕಾರ್ಖಾನೆ ವಸ್ತುಸ್ಥಿತಿಯನ್ನು ಸಿಎಂಡಿಗೆ ಮನವರಿಕೆ ಮಾಡಿಕೊಟ್ಟರು. ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಖಾನೆಗೆ ಹಲವು ಬಾರಿ ಭೇಟಿ ನೀಡಿದ್ದು ಸುಮಾರು 10 ರಿಂದ 15 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸುವ ಮೂಲಕ ಕಾರ್ಖಾನೆ ಆಧುನೀಕರಣಗೊಳಿಸಿ ಲಾಭದಾಯಕ ಉದ್ದಿಮೆಯನ್ನಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ವಿವರಿಸಿದರು.
ಗಣಿಗಳ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕೆಂದು ಹಾಗೂ ಬ್ಲಾಸ್ಟ್ ಫರ್ನೆಸ್ ಮಾರ್ಗದ ಮೂಲಕ ಅಗತ್ಯ ಪೂರಕ ಘಟಕಗಳೊಂದಿಗೆ ಹೂಡಿಕೆ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶೋಕ್‌ಕುಮಾರ್ ಪಾಂಡೆ, ಉಕ್ಕು ಸಚಿವರ ಮಾರ್ಗದರ್ಶನದಂತೆ ವಿವಿಧ ವ್ಯವಹಾರ ಮತ್ತು ಹೂಡಿಕೆ ಯೋಜನೆಗಳು ಚರ್ಚೆಯಲ್ಲಿವೆ. ವಿಐಎಸ್‌ಎಲ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು ಈ ವರ್ಷವೇ ಲಾಭಗಳಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಅಗತ್ಯ. ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ದೀರ್ಘಕಾಲೀನ ಯೋಜನೆ ಕೈಗೂಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಅನೂಪ್‌ಕುಮಾರ್, ಅಧಿಕಾರಿಗಳಾದ ರವಿಚಂದ್ರನ್, ಲೋಕನಾಥ್ ಶುಕಾಲಿ, ಕಾರ್ಮಿಕ ಸಂಘದ ಅಧ್ಯಕ್ಷ ಅಮೃತ್‌ಕುಮಾರ್, ನರಸಿಂಹಾಚಾರ್ ಇತರರಿದ್ದರು.