ಸಚಿವ ಸ್ಥಾನ ಸಿಗದಿದ್ದಕ್ಕೆ ನೋವಾಗಿದೆ | meet the press

ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು
Published on
ಸಾಗರ: ಸಚಿವ ಸ್ಥಾನ ಸಿಗದಿರುವುದು ಬೇಸರವಲ್ಲ, ಮನಸ್ಸಿಗೆ ನೋವಾಗಿರುವುದು ಸತ್ಯ. ಆದರೆ ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ಕೊಟ್ಟು ನೋವನ್ನು ನುಂಗಿಕೊಂಡು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ಕೊನೆಯವರೆಗೂ ಪ್ರಯತ್ನ ಮಾಡಿದ್ದೇನೆ. ಪಟ್ಟಿಯಲ್ಲಿ ನನ್ನ ಹೆಸರಿದ್ದು, ಕೊನೆಯ ಕ್ಷಣದಲ್ಲಿ ಕೈತಪ್ಪಿ ಹೋಗಿದೆ. ಇದಕ್ಕೆ ಕಾರಣವೇನು ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ನಾನು ಬಿಜೆಪಿ ಸೇರಲು ಸಂಘ ಪರಿವಾರದ ಪ್ರಮುಖರೊಬ್ಬರಿಗೆ ಕರೆ ಮಾಡಿದ್ದೇನೆ ಎಂದು ಮಾಜಿ ಶಾಸಕ ಹಾಲಪ್ಪ ನೀಡಿದ ಹೇಳಿಕೆ ಸುಳ್ಳು. ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನನಗೆ ಬಿಜೆಪಿ, ಸಂಘ ಪರಿವಾರದಲ್ಲಿ ಆತ್ಮೀಯರಿದ್ದಾರೆ. ನನಗೆ ಸಚಿವ ಸ್ಥಾನ ಸಿಗಲಿ ಎಂದು ಅವರು ಬಯಸಿದ್ದರು. ಸಚಿವ ಸ್ಥಾನ ತಪ್ಪಿ ಹೋದಾಗ ಸಾಕಷ್ಟು ಜನ ಸಾಂತ್ವನ ಹೇಳಿದ್ದಾರೆ. ಆದರೆ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಿದ್ದಾರೆ. ಇಂತಹ ಹೊತ್ತಿನಲ್ಲಿ ಬಿಜೆಪಿ ಸೇರುವ ಅಗತ್ಯ ನನಗೆ ಇಲ್ಲ. ಬಹುಶಃ ಹರತಾಳು ಹಾಲಪ್ಪ ಅವರಿಗೆ ಈ ಹಿಂದೆ ತಾವು ಕಾಂಗ್ರೆಸ್ ಸೇರಲು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕನಸು ಮತ್ತೆ ಬಿದ್ದಿರಬೇಕು. ಸದ್ಯಕ್ಕೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಇಂತಹ ಹೊತ್ತಿನಲ್ಲಿ ಯಾರಾದರೂ ಬಿಜೆಪಿಗೆ ಸೇರುತ್ತಾರಾ ಎಂದು ಮರು ಪ್ರಶ್ನೆ ಹಾಕಿದರು.
ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ನಾನು ವಾಸ್ತು ದೋಷ ನಿವಾರಣೆಗಾಗಿ ಮನೆ ಪಕ್ಕದ ಬಾವಿ ಮುಚ್ಚಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಬಾವಿ ನಮ್ಮ ಜಾಗದಲ್ಲಿಯೇ ಇಲ್ಲ. ಜಾಗದ ಮಾಲೀಕರು ಕೋಳಿ, ಜಾನುವಾರುಗಳು ಬೀಳುತ್ತವೆ ಬಾವಿ ಮುಚ್ಚಿಸಿ ಎಂದು ನಗರಸಭೆಗೆ ಅರ್ಜಿ ಕೊಟ್ಟಿದ್ದರಿಂದ ಬಾವಿ ಮುಚ್ಚಿಸಿದ್ದಾರೆ. ಜನರಿಗೆ ನೀರಿನ ಸಮಸ್ಯೆ ಆಗಬಾರದು ಹೊಸ ಬಾವಿ ತೆಗೆಸಿ ಕೊಟ್ಟಿದ್ದೇನೆ. ಟೀಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿ ಕೆಲಸ ಮಾಡುತ್ತೇನೆ ಎಂದರು.
"

ಮಧು ಬಂಗಾರಪ್ಪ ಸಚಿವರಾಗಿದ್ದು ನನಗೆ ಬೇಸರವಿಲ್ಲ. ಅವರ ಹಕ್ಕು ಅವರು ಕೇಳಿದ್ದಾರೆ. ನನ್ನ ಹಕ್ಕು ನಾನು ಕೇಳಿದ್ದೇನೆ. ನಾನು ಸಚಿವ ಸ್ಥಾನಕ್ಕಾಗಿ ಎರಡು ತಿಂಗಳು ಕ್ಷೇತ್ರದಲ್ಲಿ ಇಲ್ಲದೆ ಇರುವುದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ ಹರತಾಳು ಹಾಲಪ್ಪ ಸಚಿವರಾಗಿದ್ದ ಸಂದರ್ಭ ಆರು ತಿಂಗಳು ಜೈಲಿನಲ್ಲಿದ್ದುದನ್ನು ಬಹುಶಃ ಮರೆತಿರಬೇಕು.

— ಗೋಪಾಲಕೃಷ್ಣ ಬೇಳೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net