ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ನೀಡಿರುವ ಎರಡು ಡಯಾಲಿಸಿಸ್ ಯಂತ್ರಗಳನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಶ್ರೀನಿವಾಸ್, ಶೀನಣ್ಣ, ಗೀತಾ ರಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ ಇತರರಿದ್ದರು.
ತೀರ್ಥಹಳ್ಳಿ: ತಾಲೂಕು ಆಸ್ಪತ್ರೆಯಲ್ಲಿ ತಿಂಗಳಿಗೆ 600 ಡಯಾಲಿಸಿಸ್ ಚಿಕಿತ್ಸೆ ನಡೆಯುತ್ತಿದ್ದು, ಹೊಸದಾಗಿ ಎರಡು ಯಂತ್ರ ಅಳವಡಿಕೆಯಿಂದ ಹೆಚ್ಚುವರಿ 200 ಜನರಿಗೆ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ 25 ಲಕ್ಷ ರೂ. ವೆಚ್ಚದಲ್ಲಿ ನೀಡಿದ ಎರಡು ಡಯಾಲಿಸಿಸ್ ಯಂತ್ರಗಳ ಕೊಡುಗೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಯಾಲಿಸಿಸ್ ಚಿಕಿತ್ಸೆಗೆ ಸಾವಿರಾರು ರೂ. ಖರ್ಚು ಮಾಡಿ ಶಿವಮೊಗ್ಗ, ಮಣಿಪಾಲ ಆಸ್ಪತ್ರೆಗೆ ಹೋಗಬೇಕಿದ್ದ ರೋಗಿಗಳಿಗೆ ದಾನಿಗಳ ನೆರವಿನಿಂದ ಜೆಸಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತಾಗಿದೆ ಎಂದು ತಿಳಿಸಿದರು.
100 ಬೆಡ್ ಆಸ್ಪತ್ರೆಗೆ ಇನ್ನಷ್ಟು ಅಗತ್ಯ ಕಾಮಗಾರಿಗಳು ನಡೆಯಬೇಕದೆ. ಸರ್ಕಾರದ ಅನುದಾನದಿಂದ ನಿರ್ವಹಣೆ ಅಸಾಧ್ಯವಾಗಿದೆ. ಮೊದಲು 50 ಲಕ್ಷ ರೂ. ವೆಚ್ಚದಲ್ಲಿ ಎರಡು ಡಯಾಲಿಸಿಸ್ ಯಂತ್ರ, ಕಣ್ಣಿನ ಚಿಕಿತ್ಸೆಗೆ ಅಗತ್ಯವಿದ್ದ ಲೇಸರ್ ಯಂತ್ರ ಮತ್ತು ಶವಾಗಾರಕ್ಕೆ ಅಗತ್ಯವಿದ್ದ ಶೀಥಲೀಕರಣ ಯಂತ್ರಗಳನ್ನು ನೀಡಿರುವ ಜಿ.ಶಂಕರ್ ಅವರಂತೆ ದಾನಿಗಳು ಕೊಡುಗೆ ನೀಡಲು ಮುಂದಾಗಬೇಕು ಎಂದರು.
ಆಸ್ಪತ್ರೆ ಆವರಣದಲ್ಲಿ ಅತಿ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಜನೌಷಧ ಕೇಂದ್ರಗಳನ್ನು ತೆರವುಗೊಳಿಸಿರುವುದು ಬಡವರಿಗಾದ ಅನ್ಯಾಯ. ವೆಚ್ಚವನ್ನು ಕಡಿತ ಮಾಡುವ ಸಲುವಾಗಿ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಬೇಕೆಂಬ ಆದೇಶ ಅತ್ಯಂತ ಅಮಾನವೀಯ. ಈಚೆಗೆ ಆಸ್ಪತ್ರೆಗೆ ಒದಗಿಸಿರುವ ಹಾಸಿಗೆ ಒಬ್ಬರಿಗೂ ಮಲಗುವುದಕ್ಕೆ ಸಾಧ್ಯವಿಲ್ಲ. ಇದರ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ದೂರಿದರು.
ತಾಲೂಕು ಮೊಗವೀರ ಮಹಾಜನ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಶೀನಣ್ಣ, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರವಿಂದ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಡಯಾಲಿಸಿಸ್ ನಿರ್ವಹಣೆ ಮಾಡುವ ನೆಫ್ರೋ ಸಂಸ್ಥೆ ಸಿಬ್ಬಂದಿ ಇದ್ದರು.