ಭಕ್ತರ ಶ್ರಮದಿಂದ ಪುಣ್ಯಾಶ್ರಮ ಅಭಿವೃದ್ಧಿ | guru poornime

ಶಿರಾಳಕೊಪ್ಪ ಹತ್ತಿರದ ಕಡೇನಂದಿಹಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥದ ಮನೆಯನ್ನು ಶಾಸಕ ವಿಜಯೇಂದ್ರ ಉದ್ಘಾಟಿಸಿದರು. ಶ್ರೀ ಶಿವಯೋಗಿ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ ಇತರರಿದ್ದರು.
ಶಿರಾಳಕೊಪ್ಪ ಹತ್ತಿರದ ಕಡೇನಂದಿಹಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥದ ಮನೆಯನ್ನು ಶಾಸಕ ವಿಜಯೇಂದ್ರ ಉದ್ಘಾಟಿಸಿದರು. ಶ್ರೀ ಶಿವಯೋಗಿ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ ಇತರರಿದ್ದರು.
Published on
ಶಿರಾಳಕೊಪ್ಪ: ಜನವಸತಿಯಿಂದ ದೂರದಲ್ಲಿದ್ದರೂ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಗಮನಾರ್ಹವಾಗಿವೆ. ಮುಂದಿನ ದಿನಗಳಲ್ಲಿ ಕಡೇನಂದಿಹಳ್ಳಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಗುರುಪೂರ್ಣಿಮೆಯ ಅಂಗವಾಗಿ ಕಡೇನಂದಿಹಳ್ಳಿಯ ಪುಣ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರ ದೂರದೃಷ್ಟಿ, ಪರಿಶ್ರಮ ಹಾಗೂ ಭಕ್ತರ ಸಹಕಾರದಿಂದ ಆಶ್ರಮವು ವೇಗವಾಗಿ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ನಾನೂ ಸಹ ಅಗತ್ಯ ಸಹಕಾರ ನೀಡುತ್ತೇನೆ ಎಂದರು.
ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಸಮಾಜದ ಸೌಹಾರ್ದ, ಸದ್ಭಾವನೆ ಮತ್ತು ಮೌಲ್ಯಯುತ ಬದುಕಿಗೆ ದಾರಿದೀಪವಾಗಿವೆ. ಧಾರ್ಮಿಕ ಆಚರಣೆಗಳು ಹೆಚ್ಚಿದಂತೆ ಸಮಾಜದಲ್ಲಿ ಸಾಮರಸ್ಯವೂ ವೃದ್ಧಿಯಾಗಲಿದೆ ಎಂದು ಹೇಳಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಹರಕೆ ರಥದ ಮನೆ ಉದ್ಘಾಟಿಸಲಾಯಿತು. ಶ್ರಾವಣ ಮಾಸದಲ್ಲಿ ಧರ್ಮಜಾಗೃತಿ ಮತ್ತು ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ವಿಶೇಷ ಶಿವಪೂಜೆ ಹಾಗೂ ತಪೋನುಷ್ಠಾನ ಕಾರ್ಯಕ್ರಮಗಳ ಮಾಹಿತಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಶಿಲಾಮಂಟಪ ಹಾಗೂ ಆಶ್ರಮದ ಸುತ್ತ ಕೋಟೆ ನಿರ್ಮಾಣ ಕಾಮಗಾರಿಗೆ ವಿಜಯೇಂದ್ರ ಚಾಲನೆ ನೀಡಿದರು.
ಹರನಹಳ್ಳಿ ಶ್ರೀ ಶಿವಯೋಗಿ ಶಿವಾಚಾರ್ಯರು, ಅರಕೆರೆ ಶ್ರೀ ಚನ್ನವೀರ ಸ್ವಾಮೀಜಿ, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net