ರೈತರ ಏಳಿಗೆಗಾಗಿ ನೂತನ ತಳಿ, ತಂತ್ರಜ್ಞಾನ ಅಭಿವೃದ್ಧಿ

ಆನಂದಪುರ ಸಮೀಪ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಡಾ. ಬಿ.ಹೇಮ್ಲಾನಾಯ್ಕಾ, ಡಾ. ಎಸ್.ಶ್ರೀಧರ್, ಡಾ. ರಾಘವೇಂದ್ರ ಮೇಸ್ತ ಇತರರಿದ್ದರು.
ಆನಂದಪುರ ಸಮೀಪ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಡಾ. ಬಿ.ಹೇಮ್ಲಾನಾಯ್ಕಾ, ಡಾ. ಎಸ್.ಶ್ರೀಧರ್, ಡಾ. ರಾಘವೇಂದ್ರ ಮೇಸ್ತ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿಕೆ
  • ಇರುವಕ್ಕಿಯಲ್ಲಿ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ
  • ವಿವಿಯಿಂದ ಮೂರು ಪೇಟೆಂಟ್
ಆನಂದಪುರ: ಸಂಶೋಧನೆಯಲ್ಲಿ ನಾವೀನ್ಯತೆ ತರಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅತ್ಯಾಧುನಿಕ ಸಂಶೋಧನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ಪುಷ್ಟಿ ನೀಡುವ ಕಾರ್ಯವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ಇರುವಕ್ಕಿಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿವಿ ಆವರಣದಲ್ಲಿ ಆಯೋಜಿಸಿದ್ದ 10ನೇ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿವಿ ಪ್ರಯತ್ನದ ಫಲವಾಗಿ ರೈತರ ಏಳಿಗೆಗಾಗಿ ವಿವಿಧ ಬೆಳೆಗಳ ನೂತನ 23 ತಳಿ, 58 ತಂತ್ರಜ್ಞಾನ ಹಾಗೂ 3 ಪೇಟೆಂಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವಿ ಆರಂಭಿಸಲಾಗಿದೆ. ಸುದೀರ್ಘ ಇತಿಹಾಸ ಹೊಂದಿರುವ ಇತರ ಕೃಷಿ ವಿಶ್ವವಿದ್ಯಾಲಯಗಳ ಮಟ್ಟಕ್ಕೆ ನಮ್ಮ ವಿಶ್ವವಿದ್ಯಾಲಯ ಶೈಕ್ಷಣಿಕ ಅಭಿವೃದ್ಧಿ ಸಾಧಿಸಿದೆ. ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಹಾಗೂ ವಿದೇಶಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಆಧುನಿಕ ಸಂಶೋಧನೆಗಳು ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ಪೂರಕವಾಗಿವೆ ಎಂದರು.
"

ಕೃಷಿ ಕ್ಷೇತ್ರದ ಸಂಶೋಧನೆ ನಿರಂತರ ಪ್ರಕ್ರಿಯೆ. ರೈತರು ಅನುಭವಿಸುವ ಸಂಕಷ್ಟಗಳಿಗೆ ವಿವಿಧ ತಂತ್ರಜ್ಞಾನಗಳ ಮೂಲಕ ಸರಿಯಾದ ಸಮಯಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ಯುವ ವಿಜ್ಞಾನಿಗಳ ಪಾತ್ರ ಮಹತ್ತರವಾಗಿದೆ. ವಿಜ್ಞಾನಿಗಳ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಸಂಶೋಧನೆ ಫಲವಾಗಿ ಹೊರಹೊಮ್ಮುವ ನವೀನ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಲಿವೆ. ಡಾ. ಬಿ.ಹೇಮ್ಲಾನಾಯ್ಕಾಕೃಷಿ ವಿವಿ ಶಿಕ್ಷಣ ನಿರ್ದೇಶಕ

ಡೀನ್(ಸ್ನಾತಕೋತ್ತರ) ಹಾಗೂ ಸಂಘಟನಾ ಕಾರ್ಯದರ್ಶಿ ಡಾ. ಟಿ.ಕೆ.ನಾಗರತ್ನಾ ಮಾತನಾಡಿ, ಸಂಶೋಧನಾ ಸಮ್ಮೇಳನದಲ್ಲಿ 104 ಸ್ನಾತಕೋತ್ತರ ವಿದ್ಯಾರ್ಥಿಗಳು ಪೋಸ್ಟರ್ ಪ್ರಸ್ತುತಿ ಮೂಲಕ ಹಾಗೂ 11 ಪಿಎಚ್.ಡಿ ವಿದ್ಯಾರ್ಥಿಗಳು ಮೌಖಿಕ ಪ್ರಸ್ತುತಿ ಮೂಲಕ ಸಂಶೋಧನಾ ಫಲಿತಾಂಶಗಳನ್ನು ಮಂಡಿಸುವರು. ತಜ್ಞರ ತಂಡ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡುವರು ಎಂದು ತಿಳಿಸಿದರು.
ಸಂಶೋಧನಾ ನಿರ್ದೇಶಕ ಡಾ. ಎಸ್.ಶ್ರೀಧರ, ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಮೇಸ್ತ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ನಾರಾಯಣ ಮಾವರಕರ, ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ. ಎಚ್.ಕೆ.ವೀರಣ್ಣ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net