ಸಾಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಸದಾನಂದಸ್ವಾಮಿ, ವಿ.ಟಿ.ಸ್ವಾಮಿ, ಡಾ. ಶಂಕರ ಶಾಸ್ತ್ರಿ ಇತರರಿದ್ದರು.
ಸಾಗರ: ಕನ್ನಡ ಸಾರಸ್ವತ ಲೋಕಕ್ಕೆ ಸಾಹಿತಿಗಳು ನೀಡಿರುವ ಶ್ರೇಷ್ಠ ಕೃತಿಗಳನ್ನು ಮಕ್ಕಳು ಅಭ್ಯಾಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ ಹೇಳಿದರು.
ಸಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ, ಜಾನಪದ ಪರಿಷತ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಶಾಲಾ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜತೆ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದೆ. ಶಾಲಾ ಅಂಗಳದಲ್ಲಿ ಸಾಹಿತ್ಯವಿದ್ದರೆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರತರಲು ಸಹಕಾರಿಯಾಗುತ್ತದೆ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಪರಮೇಶ್ವರಪ್ಪ ಮಾತನಾಡಿ, ಮನುಷ್ಯನನ್ನು ಸದಾ ಕ್ರಿಯಾಶೀಲ ಆಗಿರಿಸುವಲ್ಲಿ ಸಾಹಿತ್ಯದ ಪಾತ್ರ ಪ್ರಮುಖ. ಒಂದು ಒಳ್ಳೆಯ ಪುಸ್ತಕ ಮನುಷ್ಯನ ಮನಸ್ಸನ್ನು ವಿಕಸನಗೊಳಿಸುತ್ತದೆ. ಸಾಹಿತ್ಯವನ್ನು ಮನೆಮನಕ್ಕೆ ತಲುಪಿಸುವ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ತಿಳಿಸಿದರು.
ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಡಾ. ಶಂಕರ ಶಾಸ್ತ್ರಿ, ಬಾಷಾ ಸಾಬ್, ಸತ್ಯನಾರಾಯಣ ಸಿರಿವಂತೆ, ಸದಾನಂದ ಶರ್ಮ, ಬಿ.ಡಿ.ರವಿಕುಮಾರ್, ನಾರಾಯಣಮೂರ್ತಿ, ಗಜಾನನ, ರಾಜಾನಾಯ್ಕ ಇತರರಿದ್ದರು.