ತುಂಗಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಮನಸ್ಸಿನ ಆರೋಗ್ಯ ಕುರಿತ ಶಿಬಿರದಲ್ಲಿ ಮನಃಶಾಸಜ್ಞ ಸುರೇಶ್ ಕುಡುಮಲ್ಲಿಗೆ ಮಾತನಾಡಿದರು. ಡಾ. ಆರ್.ಕುಮಾರಸ್ವಾಮಿ, ಡಾ. ಅನಿಕೇತನ್, ಡಾ. ಶೋಭಾ ಇತರರಿದ್ದರು.
ತೀರ್ಥಹಳ್ಳಿ: ಖಿನ್ನತೆಯಿಂದಾಗಿ ವಿದ್ಯಾರ್ಥಿಗಳಿಗೆ ಎದುರಾಗುವ ಅಪಾಯವನ್ನು ಆರಂಭದಲ್ಲಿಯೇ ಗಮನಿಸಿ, ಆಪ್ತ ಸಮಾಲೋಚನೆ ಮೂಲಕ ಸರಿದಾರಿಗೆ ತರಬಹುದು ಎಂದು ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಮನಃಶಾಸಜ್ಞ ಸುರೇಶ್ ಕುಡುಮಲ್ಲಿಗೆ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಜಿಲ್ಲಾಡಳಿತ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ನಿಮ್ಹಾನ್ಸ್ ಬೆಂಗಳೂರು, ಆರೋಗ್ಯ ಇಲಾಖೆ ಮತ್ತು ಪ್ರಾದೇಶಿಕ ಜಂಟಿ ನಿರ್ದೇಶಕರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಮನಸ್ಸಿನ ಆರೋಗ್ಯ ಕುರಿತ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚೆಗೆ ಮಾನಸಿಕವಾಗಿ ಬಳಲುವವರ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಖಿನ್ನತೆಯ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮುಂದೆ ಸಂಭವಿಸುವ ಅಪಾಯವನ್ನು ತಡೆಯಬಹುದು. ಆದರೆ ಈ ಸಮಸ್ಯೆಗೆ ಚಿಕಿತ್ಸೆ ಪಡೆಯುವಲ್ಲಿ ಹಿಂದೇಟು ಹಾಕುವವರ ಪ್ರಮಾಣ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಲೇಜಿನಲ್ಲಿ ಕಳೆಯುವುದರಿಂದ ಅವರ ಚಲನವಲನ ಗುರುತಿಸುವುದು ಅಧ್ಯಾಪಕರಿಗೆ ಸುಲಭ. ಈ ನಿಟ್ಟಿನಲ್ಲಿ ಶಿಬಿರ ಅತ್ಯಂತ ಮಹತ್ವ ಪಡೆದಿದೆ. ಅಧ್ಯಾಪಕರು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್ ಮಾತನಾಡಿ, ಪ್ರಸ್ತುತ ಅವಿಭಕ್ತ ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದೆ. ಯುವಜನರು ಮಾದಕ ವ್ಯಸನಗಳ ದಾಸರಾಗುತ್ತಿರುವುದು ಆತಂಕದ ಸಂಗತಿ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೂ ಮಾನವೀಯ ಸಂಬಂಧಗಳ ಶಿಥಿಲಕ್ಕೆ ಕಾರಣವಾಗುತ್ತಿದ್ದು, ಇದನ್ನು ಸರಿದಾರಿಗೆ ತರುವ ಹೊಣೆಗಾರಿಕೆ ನಮ್ಮೆಲ್ಲರದು ಎಂದರು.
ವೈದ್ಯಾಧಿಕಾರಿ ಶರತ್ ಮಾತನಾಡಿ, ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಇವೆರಡರ ಸಮತೋಲನದಿಂದ ಮಾತ್ರ ನಿಶ್ಚಿಂತೆಯ ಬದುಕು ಸಾಧ್ಯ. ಹಾಗಾಗಿ ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ಇಂತಹ ತರಬೇತಿ ಕಾರ್ಯಕ್ರಮಗಳು ಉಪಯುಕ್ತ ಎಂದು ಹೇಳಿದರು.
ತುಂಗಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ, ಡಾ. ಶೋಭಾ, ಮಾನಸಿಕ ತಜ್ಞೆ ನಿಶ್ಚಿತಾ, ಮಂಜುನಾಥ್, ಕಾಲೇಜಿನ ಅಧ್ಯಾಪಕರಾದ ಡಾ. ನಾಗರಾಜ್, ಡಾ. ಡಿ.ರಮೇಶ್, ಮೋಹನ್‌ಕುಮಾರ್ ಇದ್ದರು.