ಸಾಗರ ತಾಲೂಕಿನ ಕೆ.ಜಿ.ಕೊಪ್ಪ ಗ್ರಾಮದಲ್ಲಿ ಸರ್ಕಾರಿ ಭೂಮಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಎಸಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ಸಂದರ್ಭ ಭೂಮಿ ರಕ್ಷಣೆಗೆ ಹೋರಾಡುತ್ತಿರುವ ಪದ್ಮನಾಭ ಅವರನ್ನು ಜಿಲ್ಲಾ ರೈತ ಸಂಘದಿಂದ ಸನ್ಮಾನಿಸಲಾಯಿತು. ದಿನೇಶ್ ಶಿರವಾಳ, ರಮೇಶ್ ಕೆಳದಿ, ರಾಮಚಂದ್ರಪ್ಪ, ನಾಗವೇಣಿ, ಕೆರೆಯಮ್ಮ ಇತರರಿದ್ದರು.
ಸಾಗರ: ಸಾಗರ ತಾಲೂಕಿನ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಜಿ.ಕೊಪ್ಪ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಗ್ರಾಮಸ್ಥರೇ ಹಲವು ವರ್ಷಗಳಿಂದ ಅರಣ್ಯ ರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ. ತಡಗಳಲೆ ಗ್ರಾಮದ ಕೆಲವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಸಾಗುವಳಿಗೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಇವರ ಬಳಿ 15 ಎಕರೆಗೂ ಹೆಚ್ಚು ಭೂಮಿ ಇದೆ. ಕೆಲವಷ್ಟು ಭೂಮಿಯನ್ನು ಲೀಸ್‌ಗೆ ಕೊಟ್ಟಿದ್ದಾರೆ. ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಜೀವಬೆದರಿಕೆ ಸಹ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಸಹ ದೂರು ಕೊಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೆ.ಜಿ.ಕೊಪ್ಪದ ಸರ್ವೇ ನಂ. 24ರಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ನೈಸರ್ಗಿಕವಾಗಿ ಅರಣ್ಯ ಬೆಳೆಸಿದ್ದಾರೆ. ಇದನ್ನು ಸಹಿಸದ ಕೆಲವು ಭೂಗಳ್ಳರು ಅಪಪ್ರಚಾರಕ್ಕೆ ಇಳಿದು ಗ್ರಾಮಸ್ಥರ ಬೆನ್ನಿಗೆ ನಿಂತ ರೈತ ಸಂಘದ ವಿರುದ್ಧ ಸುಳ್ಳುಸುದ್ದಿ ಹರಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೋಮಾಳ, ಸರ್ಕಾರಿ ಜಾಗ ಒತ್ತುವರಿಯಾಗುತ್ತಿದ್ದು ಕೆ.ಜಿ.ಕೊಪ್ಪ ಗ್ರಾಮಸ್ಥರು ಮಾದರಿಯಾಗಿ ಜಾಗ ರಕ್ಷಣೆ ಜತೆಗೆ ಕಾಡು ಬೆಳೆಸುತ್ತಿದ್ದಾರೆ. ತಾಲೂಕು ಆಡಳಿತ ಈ ಕುಟುಂಬಗಳಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.